ಕವರ್ ಸ್ಟೋರಿ

ವೀರಕಂಭ ಗ್ರಾಪಂ ಕಟ್ಟಡ ಮೇಲ್ದರ್ಜೆಗೇರಬೇಕಿದೆ – ಏನೇನು ಬೇಕಿದೆ?

ಹರೀಶ ಮಾಂಬಾಡಿ

ನಾಲ್ಕು ಕೊಠಡಿಗಳಿರುವ ಮಣ್ಣಿನ ಗೋಡೆಯ ಸಣ್ಣ ಕಟ್ಟಡದಲ್ಲಿ ದಶಕಗಳ ಕಾಲ ವೀರಕಂಭ ಗ್ರಾಮಾಡಳಿತದ ಕಾರುಬಾರುಗಳು ನಡೆಯುತ್ತಿದ್ದವು. ಕಾಲ ಬದಲಾದಂತೆ ಅವಶ್ಯಕತೆಗಳು ಹೆಚ್ಚಾದವು. ಕಟ್ಟಡ ಮಾತ್ರ ಹಾಗೆಯೇ ಉಳಿಯಿತು. ಪ್ರಸ್ತುತ ಕಲ್ಲಡ್ಕ ವಿಟ್ಲ ರಾಜ್ಯ ಹೆದ್ದಾರಿಯ ಪಕ್ಕವೇ ಇರುವ ವೀರಕಂಭ ಗ್ರಾಪಂ ಕಟ್ಟಡದ ಆಯಸ್ಸು ಕ್ಷೀಣಿಸುತ್ತಿದೆ. ಮಾಡು ಸೋರುತ್ತಿದೆ. ಸದ್ಯಕ್ಕೆ ವೀರಕಂಭ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ, ಸಿಬಂದಿ ಕೆಲಸ ಮಾಡುವುದಿಲ್ಲ. ಸದಸ್ಯರ ಮೀಟಿಂಗ್ ಗಷ್ಟೇ ಕಟ್ಟಡ ಉಪಯೋಗಕ್ಕೆ ದೊರಕುತ್ತಿದ್ದರೆ, ಆಡಳಿತ ಕಚೇರಿಯೆಲ್ಲವೂ ಸಮೀಪದ ರಾಜೀವಗಾಂಧಿ ಸೇವಾ ಕೇಂದ್ರಕ್ಕೆ ಶಿಫ್ಟ್ ಆಗಿದೆ.

ಹಳೆಯ ಕಟ್ಟಡ

ಗ್ರಾಮ ಪಂಚಾಯಿತಿ ಆದರೂ ಬಹುಮಹಡಿ ಸಂಕೀರ್ಣಗಳಿರುವ ಪ್ರದೇಶಗಳು ಕೆಲವೆಡೆ ಇರುತ್ತದೆ. ಅಂಥ ಸಣ್ಣದೊಂದು ಪೇಟೆ ಇದ್ದರೂ ವೀರಕಂಭ ಗ್ರಾಮ ಪಂಚಾಯಿತಿಗೆ ಆದಾಯ ಬರುತ್ತಿತ್ತು. ಆದರೆ ಮಂಗಳಪದವು ಹೊರತುಪಡಿಸಿದರೆ, ಯಾವುದೊಂದೂ ವ್ಯಾಪಾರಿ ಕೇಂದ್ರಗಳ ಸಮುಚ್ಚಯವೂ ಇಲ್ಲದ ಈ ಪಂಚಾಯಿತಿ ವ್ಯಾಪ್ತಿ ಕೃಷಿಪ್ರಧಾನವಾಗಿದ್ದು, ಸುಮಾರು 6 ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದೆ.

ಈಗ ಕಾರ್ಯಾಚರಿಸುತ್ತಿರುವ ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡ

ಹಿಂದೆ ವೀರಕಂಭ ಗ್ರಾಪಂ ಬೋಳಂತೂರು ಗ್ರಾಮವನ್ನು ಒಳಗೊಂಡಿತ್ತು. ಪುನರ್ವಿಂಗಡಣೆ ಬಳಿಕ 2015-16ರಲ್ಲಿ ವೀರಕಂಭದಿಂದ ಬೋಳಂತೂರು ಬೇರ್ಪಟ್ಟಿತು. ಆದರೂ ಎರ್ಮೆಮಜಲು ಗಣೇಶಕೋಡಿಯಿಂದ ಮಂಗಳಪದವಿನವರೆಗೆ ಈ ಗ್ರಾಪಂ ವಿಸ್ತಾರವಿದೆ. ಒಟ್ಟು 14 ಮಂದಿ ಪಂಚಾಯಿತಿ ಸದಸ್ಯರು ಚುನಾಯಿತರಾಗಿದ್ದಾರೆ. ಅಧ್ಯಕ್ಷರಾಗಿ ಲಲಿತಾ ಮತ್ತು ಉಪಾಧ್ಯಕ್ಷರಾಗಿ ಜನಾರ್ದನ ಪೂಜಾರಿ ಚುನಾಯಿತ ಜನಪ್ರತಿನಿಧಿಗಳ ನಾಯಕರು.

ಕಾಯಂ ಪಿಡಿಒ ಇಲ್ಲ

ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕಾಯಂ ನೆಲೆಯಲ್ಲಿಲ್ಲ. ಬೇರೆ ಪಂಚಾಯತ್ ನಿಂದ ನಿಯೋಜನೆ ಮೇರೆಗೆ ಇಲ್ಲಿಗೆ ಆಗಮಿಸಿದ್ದಾರೆ. ಹೀಗಾಗಿ ಪೂರ್ಣಪ್ರಮಾಣದ ಕೆಲಸವಾಗಬೇಕಾದರೆ, ಇಲ್ಲಿ ಕಾಯಂ ಪಿಡಿಒ ನೇಮಿಸುವುದು ಅಗತ್ಯವಿದೆ. ಪಿಡಿಒ ಪ್ರಭಾರ ನೆಲೆಯಲ್ಲಿದ್ದರೆ, ಗ್ರಾಪಂ ಕಾರ್ಯದರ್ಶಿ ಇದ್ದರೂ ಅವರು ತಾಪಂಗೆ ಪ್ರಭಾರ ನೆಲೆಯಲ್ಲಿ ಕರ್ತವ್ಯಕ್ಕೆ ತೆರಳುತ್ತಾರೆ. ಜಿಲ್ಲಾ ಪಂಚಾಯಿತಿ ಅನುಮೋದನೆಯನ್ವಯ ನಾಲ್ವರು ಸಿಬಂದಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಳೇ ಕಟ್ಟಡ ಸೋರುತ್ತಿದೆ

ವೀರಕಂಭ ಗ್ರಾಮ ಪಂಚಾಯಿತಿ ಕಟ್ಟಡ ಸೋರುತ್ತಿದ್ದು, ಕಚೇರಿ ಕಾರ್ಯನಿರ್ವಹಣೆ ಕಷ್ಟವೆನಿಸಿದಾಗ ಕಳೆದ ವರ್ಷ ಕಚೇರಿಯನ್ನು ರಾಜೀವ ಗಾಂಧಿ ಸೇವಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಈಗ ಈ ಕಟ್ಟಡದಲ್ಲಿ ಪಂಚಾಯಿತಿ ಸದಸ್ಯರ ಮೀಟಿಂಗ್ ಆಗುತ್ತದೆ. ಒಂದರಲ್ಲಿ ಗ್ರಾಮಲೆಕ್ಕಿಗರ ಕಚೇರಿ ಕಾರ್ಯನಿರ್ವಹಿಸುತ್ತಿದ್ದರೆ, ಮತ್ತೊಂದು ಕೊಠಡಿಯಲ್ಲಿ ಲೈಬ್ರೆರಿ ಇದೆ. ಮಳೆ ಬಂದರೆ ಕೊಠಡಿಯೊಳಗೂ ನೀರು ಜಿನುಗುತ್ತದೆ.

ಹೊಸ ಕಟ್ಟಡಕ್ಕೆ ಬೇಡಿಕೆ

ಗ್ರಾಮ ಪಂಚಾಯಿತಿ ಸಭೆಯಲ್ಲೂ ಈ ಕುರಿತು ನಿರ್ಣಯಗಳನ್ನು ಮಾಡಲಾಗಿದ್ದು, ಗ್ರಾಪಂಗೆ ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣದ ಬೇಡಿಕೆಯನ್ನು ಇರಿಸಲಾಗಿದೆ. ಈಗಿರುವ ಸೇವಾ ಕೇಂದ್ರದ ಮುಂಭಾಗವೇ ಹೊಸ ಕಟ್ಟಡ ನಿರ್ಮಿಸಿದರೆ, ಆಗಮಿಸುವ ಊರವರಿಗೂ ಅನುಕೂಲವಾಗಲಿದೆ. ಬಂಟ್ವಾಳ ತಾಲೂಕಿನ ಹೆಚ್ಚಿನ ಗ್ರಾಪಂಗಳಿಗೆ ಸ್ವಂತ ಹೊಸ ಕಟ್ಟಡವಿದೆ. ಆದರೆ ವೀರಕಂಭ ಗ್ರಾಪಂ ಮಾತ್ರ ಇದರಿಂದ ವಂಚಿತವಾಗಿದೆ.

ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಾಗಲು ಈಗಿನ ಹಳೇ ಕಟ್ಟಡದಲ್ಲಿ ಅಸಾಧ್ಯವಾದ ಕಾರಣ ಈಗ ಸೇವಾ ಕೇಂದ್ರಕ್ಕೆ ಕಚೇರಿ ವರ್ಗಾಯಿಸಲಾಗಿದೆ. ಗ್ರಾಮಸಭೆಗಳನ್ನು ಸಮೀಪದ ಶಾಲೆಗಳಲ್ಲಿ ನಡೆಸಲಾಗುತ್ತಿದೆ. ನಮ್ಮದೇ ಆದ ಕಟ್ಟಡವೊಂದಿದ್ದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷೆ ಲಲಿತಾ

ಪಂಚಾಯಿತಿಗೆ ಅನುಕೂಲವಾಗುವಂತೆ ಹೊಸ ಕಟ್ಟಡ ನಿರ್ಮಾಣವಾಗಬೇಕಾಗಿದೆ. ಈಗಿರುವ ಹಳೆಯ ಕಟ್ಟಡ ಶಿಥಿಲವಾಗುತ್ತಿದ್ದು, ಭವಿಷ್ಯದಲ್ಲಿ ಸುಸಜ್ಜಿತ ಕಟ್ಟಡ ಗ್ರಾಪಂ ಕೆಲಸಗಳು ಸುಗಮವಾಗಿ ನಡೆಯಲು ಅವಶ್ಯಕವಾಗಿದೆ. ಈ ಕುರಿತು ಬೇಡಿಕೆ ಸಲ್ಲಿಸಲಾಗಿದೆ ಎನ್ನುತ್ತಾರೆ ಉಪಾಧ್ಯಕ್ಷ ಜನಾರ್ದನ ಪೂಜಾರಿ

ಹಳೇ ಕಟ್ಟಡ

 

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.