ಬಂಟ್ವಾಳ: ಮನೆ ಮಂದಿ ಬೀಗ ಹಾಕಿ ಹೊರಗೆ ಹೋಗಿದ್ದ ಸಂದರ್ಭ ಸುಮಾರು 4.14 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕಿನ ಇರಾ ಗ್ರಾಮದಲ್ಲಿ ಶನಿವಾರ ನಡೆದಿದೆ.
ಈ ಕುರಿತು ವನಿತಾ ಎಂಬವರು ದೂರು ನೀಡಿದ್ದು, ಅವರು ಮತ್ತು ಅವರ ಪತಿ ಬೆಳಗ್ಗೆ ಮನೆಯ ಮುಖ್ಯಬಾಗಿಲಿಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು, ಸಂಜೆ ವೇಳೆ ಅಕ್ಕ ಪೋನ್ ಮಾಡಿ, ತನ್ನ ಮನೆಯ ಎದುರಿನ ಬಾಗಿಲಿನ ಬೀಗವನ್ನು ಯಾರೋ ಮುರಿದು ಕಳ್ಳರು ನುಗ್ಗಿರುವಂತೆ ಕಂಡು ಬರುವುದಾಗಿ ತಿಳಿಸಿದ್ದಾರೆ. ಅದರಂತೆ ಕೂಡಲೇ ಮನೆಗೆ ಬಂದು ನೋಡಿದಾಗ, ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು ಯಾವುದೋ ಸಾಧನದಿಂದ ತೆರೆದಿರುವುದು ಕಂಡುಬಂದಿರುತ್ತದೆ. ಬಳಿಕ ಮನೆಯ ಒಳಗೆ ಹೋಗಿ ನೋಡಲಾಗಿ, ಬೆಡ್ ರೂಮ್ ನಲ್ಲಿದ್ದ ಕಪಾಟನ್ನು ಯಾರೋ ಕಳ್ಳರು ಸಾಧನದಿಂದ ತೆರೆದಿದ್ದು, ಅದರಲ್ಲಿದ್ದ ಬಟ್ಟೆ ಬರೆ ಹಾಗೂ ಇನ್ನಿತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುತ್ತದೆ. ಕಪಾಟಿನ ಸೇಫ್ ಲಾಕರ್ ನಲ್ಲಿದ್ದ ಅಂದಾಜು ರೂ 4,14,000 ಮೌಲ್ಯದ ಒಟ್ಟು 69 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವುದು ಕಂಡುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 74/2024 ಕಲಂ: 331(3), 305 THE BHARATIYA NYANA SANHITA(BNS) 2023 ರಂತೆ ಪ್ರಕರಣ ದಾಖಲಾಗಿರುತ್ತದೆ.