ಬಂಟ್ವಾಳ: ಕೆಲ ತಿಂಗಳ ಹಿಂದೆ ಅಪಘಾತದಿಂದ ಸಾವಿಗೀಡಾದ ನಾರಾಯಣ ಪಿ.ಎಚ್. ಅವರ ಕುಟುಂಬದವರಿಗೆ ಬಂಟ್ವಾಳದ ಬಿ.ಸಿ.ರೋಡ್ ಜೋಡುಮಾರ್ಗದ ಕರ್ಣಾಟಕ ಬ್ಯಾಂಕ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಅವರು ಕರ್ಣಾಟಕ ಬ್ಯಾಂಕ್ ಹಾಗೂ ಯುನಿವರ್ಸಲ್ ಸೋಂಪೋ ಸಹಯೋಗದೊಂದಿಗೆ ನೀಡಲಾಗುವ ಕೆಬಿಎಲ್ ಸುರಕ್ಷಾ ಅಪಘಾತ ವಿಮಾ ಮೊತ್ತವಾದ 10 ಲಕ್ಷ ರೂಗಳ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ತಹಸೀಲ್ದಾರ್, ಉಳಿತಾಯ ಖಾತೆ ಮೂಲಕ ಕುಟುಂಬಕ್ಕೆ ಭದ್ರತೆಯನ್ನು ನೀಡುವ ಸಾಮಾಜಿಕ ಕಾಳಜಿಯನ್ನು ಕರ್ಣಾಟಕ ಬ್ಯಾಂಕ್ ಪಾಲಿಸುತ್ತಿರುವುದು ಉತ್ತಮ ಸಂಗತಿ ಎಂದರು. ವಿಮಾ ಮೊತ್ತ ಪಾವತಿಗೆ ಸಂಬಂಧಿಸಿದ ಕ್ರಮಗಳನ್ನು ಸರಳೀಕರಿಸಿ, ಕ್ಲಪ್ತ ಸಮಯದಲ್ಲಿ ಒದಗಿಸುವ ಕಾರ್ಯವನ್ನು ಮಾಡಿದರೆ, ಫಲಾನುಭವಿಗಳಿಗೂ ಉಪಕಾರವಾಗುತ್ತದೆ ಎಂದ ಅವರು, ಸರಕಾರಿ ಯೋಜನೆಗಳ ಮೂಲಕ ದೊರಕುವ ಪರಿಹಾರ, ಸೌಲಭ್ಯಗಳನ್ನು ನೀಡುವ ಸಂದರ್ಭವೂ ಅದಕ್ಕೆ ಬೇಕಾದ ಕ್ರಮಗಳನ್ನು ಶೀಘ್ರ ನೆರವೇರಿಸುವಂತೆ ಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.
ಕರ್ಣಾಟಕ ಬ್ಯಾಂಕ್ ಸಹಾಯಕ ಮುಖ್ಯ ಪ್ರಬಂಧಕರೂ ಹಾಗೂ ಡೆಪ್ಯೂಟಿ ರೀಜನಲ್ ಹೆಡ್ ಆಗಿರುವ ಜೇನ್ ಮರಿಯಾ ನಳಿನಿ ಸಲ್ದಾನಾ ಮಾತನಾಡಿ, ದಿನಕ್ಕೆ ಒಂದು ರೂಗಳಿಂತಲೂ ಕಡಿಮೆ ಮೊತ್ತವಿರುವ ಈ ವಿಮಾ ಯೋಜನೆಯ ಮೂಲಕ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹತ್ತು ಲಕ್ಷ ರೂ ಒದಗಿಸುವ ಈ ಯೋಜನೆ ಬಡ ಕುಟುಂಬಗಳಿಗೆ ಆಸರೆಯಾಗುತ್ತದೆ ಎಂದರು.
ಬ್ಯಾಂಕಿನ ಮುಖ್ಯ ಪ್ರಬಂಧಕರೂ ಹಾಗೂ ಕ್ಲಸ್ಟರ್ ಮುಖ್ಯಸ್ಥರೂ ಆಗಿರುವ ಶ್ರೀಹರಿ ಭಟ್ ಮಾತನಾಡಿ, ತನ್ನ ಸಾಮಾಜಿಕ ಕಾಳಜಿಯ ಭಾಗವಾಗಿ ಬ್ಯಾಂಕ್ ಕೆಬಿಎಲ್ ಸುರಕ್ಷಾ ಯೋಜನೆಯ ಮೂಲಕ ಗ್ರಾಹಕರೊಂದಿಗೆ ಇದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.
ಯುನಿವರ್ಸಲ್ ಸೋಂಪೊ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರಸನ್ನ ಕುಮಾರ್ ಪಾಟೀಲ್ ಅವರು ಮಾಹಿತಿ ನೀಡಿ, ಕರ್ಣಾಟಕ ಬ್ಯಾಂಕ್ ಖಾತೆದಾರರು ವರ್ಷಕ್ಕೆ 300 ರೂಗಳನ್ನು ನೀಡಿದರೆ, 10 ಲಕ್ಷ ರೂ, 150 ರೂ ವಾರ್ಷಿಕ ನೀಡಿದರೆ, 5 ಲಕ್ಷ ರೂ ಹಾಗೂ 600 ರೂಗಳನ್ನು ವಾರ್ಷಿಕವಾಗಿ ನೀಡಿದರೆ, 20 ಲಕ್ಷ ರೂ ಅಪಘಾತ ವಿಮೆ ಪರಿಹಾರವನ್ನು ಕಂಪನಿ ವತಿಯಿಂದ ನೀಡಲಾಗುತ್ತದೆ, ಅಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೆ 15 ಸಾವಿರ ರೂ ನೆರವು ಒದಗಿಸಲಾಗುತ್ತದೆ, ವಾರ್ಷಿಕವಾಗಿ ಒಂದು ಬಾರಿ ಮೆಡಿಕಲ್ ಟೆಸ್ಟ್ ಗೂ ಅವಕಾಶವಿದ್ದು, ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭ, ಪ್ರಾದೇಶಿಕ ಕಚೇರಿಯ ಸೀನಿಯರ್ ಮೆನೇಜರ್ ಶಿವಶಂಕರ್ ಭಟ್, ಹಿರಿಯ ನಾಗರಿಕ ಪ್ರಭಾಕರ ಆಚಾರ್ಯ, ಶಾಖಾ ವ್ಯವಸ್ಥಾಪಕ ಅರುಣ್ ಕುಮಾರ್ ರೈ ಉಪಸ್ಥಿತರಿದ್ದರು. ಸಿಬಂದಿ ಸುಹಾಸಿನಿ ಕಾರ್ಯಕ್ರಮ ನಿರ್ವಹಿಸಿದರು,