ಇಲಾಖೆಗಳು ಗಿಡಗಳನ್ನು ನೆಡ್ತವೆ, ಅವುಗಳಿಗೆ ಸಂಘ, ಸಂಸ್ಥೆಗಳ ಪ್ರೋತ್ಸಾಹವು ಇರ್ತದೆ. ಆದರೆ ಜನರ ಸಹಭಾಗಿತ್ವ ಇದ್ದರಷ್ಟೇ ಗಿಡಗಳು ಬೆಳೆಯುತ್ತವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಆಲಂಪುರಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ದಶಲಕ್ಷ ಗಿಡಗಳ ನಾಟಿ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಭೂ ಪ್ರದೇಶದಲ್ಲಿ 33 ಶೇ.ಅರಣ್ಯ ಇರಬೇಕಿತ್ತು, ಆದರೆ ರಾಜ್ಯದಲ್ಲಿ 21 ಶೇ.ಮಾತ್ರ ಇದೆ. ಹೀಗಾಗಿ ಹಸಿರು ಹೊದಿಕೆ ಹೆಚ್ಚಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗಿಡಗಳ ನಾಟಿ ಮೂಲಕ ನಾಡಿಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದ ಸಚಿವರು, ಆನೆ ತುಳಿತದಿಂದ ಜೀವಹಾನಿಯ ಶಾಶ್ವತ ತಡೆಗಾಗಿ ಅಧ್ಯಯನ ತಜ್ಞರನ್ನು ಆಹ್ವಾನಿಸಿ ಆಗಸ್ಟ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕಾರ್ಯಾಗಾರ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ, ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಈಗಾಗಲೇ ಲಕ್ಷಾಂತರ ಗಿಡಗಳ ನಾಟಿ ನಡೆದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಗೇರು ಬೀಜ ಗಿಡಗಳನ್ನೂ ನೆಟ್ಟಿದ್ದೇವೆ. ಮುಂದಿನ ಜನಾಂಗಕ್ಕೆ ಉಪಕಾರವಾಗುವಂತೆ ಫಲ ಬರುವ ಗಿಡಗಳ ನಾಟಿ ಮಾಡಬೇಕು, ಈ ಭೂಮಿ ನಮ್ಮ ಮೊಮ್ಮಕ್ಕಳ ಆಸ್ತಿ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಸಿ ವಿತರಿಸಿ ಮಾತನಾಡಿ, ಅರಣ್ಯ ಇಲಾಖೆ ಮಾಡಬೇಕಾದ ಕಾರ್ಯವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದ್ದು, 50 ಲಕ್ಷ ಮಂದಿಯ ದೊಡ್ಡ ತಂಡ ಈ ಕಾರ್ಯದಲ್ಲಿ ತೊಡಗಿದೆ ಎಂದರು.
ಪುತ್ತೂರು ನರಿಮೊಗರಿನ ಅವಿನಾಶ್ ಕೊಡಂಕಿರಿ ಅವರಿಗೆ ಅರಣ್ಯ ಮಿತ್ರ ಪ್ರಶಸ್ತಿ ನೀಡಿ ಪುರಸ್ಕರಿಸಿದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಹವಾಮಾನ ಬದಲಾವಣೆ ಕುರಿತು ಚಿಂತನೆ, ಅಧ್ಯಯನಗಳು ನಡೆಯಬೇಕಿದ್ದು, ಪರಿಸರ ಸಂರಕ್ಷಣಾ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮಗಿದೆ ಎಂದರು.
ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕರಿಕಾಲನ್, ಅರಣ್ಯ ಇಲಾಖೆ ಮಂಗಳೂರು ವೃತ್ತ ಸಿಸಿಎಫ್ ಡಾ. ವಿ.ಕರಿಕಾಲನ್, ಮಂಗಳೂರು ವಿಭಾಗ ಡಿಸಿಎಫ್ ಆಂಟೋನಿ ಮರಿಯಪ್ಪ ವೈ.ಕೆ., ಮಂಗಳೂರು ಉಪವಿಭಾಗ ಎಸಿಎಫ್ ಪಿ.ಶ್ರೀಧರ್, ವನ್ಯಜೀವಿ ವಿಭಾಗದ ಶಿವರಾಮ ಬಾಬು, ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ, ಕಾವಳಪಡೂರು ಪಂಚಾಯತ್ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ, ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ, ಬಂಟ್ವಾಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯ, ಪ್ರಮುಖರಾದ ಶಾಂತಾರಾಮ ಪೈ, ಜಿನರಾಜ ಅರಿಗ, ಮನೋಜ್ ಮಿನೇಜಸ್, ಜಿ.ಪಂ.ಮಾಜಿ ಸದಸ್ಯರಾದ ಬಿ.ಪದ್ಮಶೇಖರ್ ಜೈನ್, ಸುಲೋಚನಾ ಭಟ್, ಕಾರಿಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಎಸ್.ಎಸ್.ಸ್ವಾಗತಿಸಿದರು. ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಿಸ್ ಪ್ರಶಸ್ತಿ ಪತ್ರ ವಾಚಿಸಿದರು. ಬಂಟ್ವಾಳ ಯೋಜನಾಧಿಕಾರಿ ಬಾಲಕೃಷ್ಣ ವಂದಿಸಿದರು. ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಪಿ.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು