ಬಂಟ್ವಾಳ: ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ನಬೈಲ್ ನಾಗನವಲಚ್ಚಿಲ್ ಮೂಲಕ ಅಮ್ಟೂರ್ ತೆರಳುವ ಮುಖ್ಯ ರಸ್ತೆಯ ನಾಗನವಲಚ್ಚಿಲ್ ಎಂಬಲ್ಲಿ ರಸ್ತೆಯಲ್ಲಿ ಕೃತಕ ನೆರೆ ಉಂಟಾಗಿರುವುದನ್ನು ದುರಸ್ತಿ ಮೂಲಕ ಸರಿಪಡಿಸಲಾಗಿದೆ.
ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ, ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾದ ಜೊತೆಗೆ ಈ ರಸ್ತೆಯಲ್ಲಿ ಹಾದು ಹೋಗುವ ಶಾಲಾ ಮಕ್ಕಳಿಗೆ ಅಪಾಯ ಸಂಭವಿಸುವ ಸಂದರ್ಭ ಇದ್ದ ಕಾರಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಎಚ್.ಕೆ. ಅವರಿಗೆ ಸ್ಥಳೀಯರಾದ ಸದಾನಂದ ಶೆಟ್ಟಿ ಈ ಕುರಿತು ಗಮನಕ್ಕೆ ತಂದಿದ್ದರು. ಕೂಡಲೇ ಸ್ಪಂದಿಸಿದ ಪಿಡಿಒ, ಸ್ಥಳಿಯ ವಾರ್ಡ್ ಸದಸ್ಯರು ಹಾಗೂ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಉಪಾಧ್ಯಕ್ಷರಾದ ಸಂದೀಪ್ ಕುಮಾರ್ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಯನ್ನು ಅವಲೋಕಿಸಿ, ತುರ್ತಾಗಿ ಜೆಸಿಬಿಮೂಲಕ ರಸ್ತೆಯ ಇಕ್ಕೆಲಗಳ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರಿನ ಸುಗಮ ಹರಿವಿಗೆ ಅನುವುಮಾಡಿಕೊಟ್ಟಿದ್ದಾರೆ. ಇದರಿಂದ ಪ್ರಸ್ತುತ ಮಳೆನೀರು ಚರಂಡಿಯಲ್ಲಿ ಹರಿಯುತ್ತಿದ್ದು ಜೋರು ಮಳೆಯಾದಾಗ ರಸ್ತೆಯಲ್ಲಿ ಉಂಟಾಗುವ ಕೃತಕ ನೆರೆಗೆ ಮುಕ್ತಿ ದೊರಕಿದೆ