ಪ್ರಾಕೃತಿಕ ವಿಕೋಪ ಉಂಟಾಗಬಹುದಾದ ಪ್ರದೇಶ ಹಾಗೂ ನೆರೆಯಿಂದ ತೊಂದರೆಗೊಳಗಾಗುವ ಪ್ರದೇಶಗಳನ್ನು ಪರಿಶೀಲಿಸಿ ಅಧಿಕಾರಿಗಳ ತಂಡದ ಜತೆ ಈ ಕುರಿತು ಮುನ್ನೆಚ್ಚರಿಕಾ ಕ್ರಮಗಳ ಮಾಹಿತಿ ಪಡೆದುಕೊಳ್ಳುವ ಕಾರ್ಯದ ಅಂಗವಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬಂಟ್ವಾಳಕ್ಕೆ ಆಗಮಿಸಿದರು.
ಪಾಣೆಮಂಗಳೂರಿನಲ್ಲಿ ನೀರಿನ ಟ್ಯಾಂಕಿಗೆ ಅಪಾಯ ಇರುವ ಪ್ರದೇಶ, ಗೂಡಿನಬಳಿಯಲ್ಲಿನ ಸಮಸ್ಯೆಯನ್ನು ವೀಕ್ಷಿಸಿದರು. ಗೂಡಿನಬಳಿ ಪ್ರದೇಶದಲ್ಲಿ ಉಂಟಾಗಿರುವ ಕುಸಿತಕ್ಕೆ ಸಂಬಂಧಿಸಿ ತಡೆಗೋಡೆ ನಿರ್ಮಿಸಲಾಗಿದ್ದು, ಅಲ್ಲಿ ಹೆಚ್ಚುವರಿ ತಡೆಗೋಡೆಯ ಜತೆಗೆ ನೀರು ಹರಿದು ಹೋಗುವುದಕ್ಕೂ ವ್ಯವಸ್ಥೆ ಆಗಬೇಕಿದೆ. ಜತೆಗೆ ಪಾಣೆಮಂಗಳೂರಿನಲ್ಲಿ ಗುಡ್ಡ ಅಗೆತದಿಂದ ತಡೆಗೋಡೆ ನಿರ್ಮಾಣವಾದರೂ ಪುರಸಭೆಯ ಟ್ಯಾಂಕ್ ಅಪಾಯದಲ್ಲಿದ್ದು ಅದಕ್ಕೂ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಈ ಸಂದರ್ಭ ಸುದ್ದಿಗಾರರಿಗೆ ತಿಳಿಸಿದರು. ಬಳಿಕ ಡಿಸಿ ಕಲ್ಲಡ್ಕ, ಮಾಣಿ, ಪೆರ್ನೆಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯನ್ನು ವೀಕ್ಷಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್‌ಕುಮಾರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಶುಶಾಂತ್, ಮಂಗಳೂರು ಸಹಾಯಕ ಕಮೀಷನರ್ ಹರ್ಷವರ್ಧನ ಪಿ.ಜೆ., ತಹಸೀಲ್ದಾರ್ ಡಿ.ಅರ್ಚನಾ ಭಟ್, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ತಾಲೂಕು ಕಚೇರಿಯ ಕಂದಾಯ ನಿರೀಕ್ಷಕರಾದ ಜನಾರ್ದನ್ ಜೆ, ವಿಜಯ್ ಆರ್, ಪುರಸಭಾ ಸಮುದಾಯ ಸಂಘಟಕಿ ಉಮಾವತಿ ಉಪಸ್ಥಿತರಿದ್ದರು.
ಮಾಣಿಯಲ್ಲಿ ಚರಂಡಿ ವ್ಯವಸ್ಥೆ, ಮನೆ ಅಪಾಯದಲ್ಲಿರುವುದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ
ಮಾಣಿ ಗ್ರಾಮದ ಹಳೀರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಅಪಾಯದ ಅಂಚಿಗೆ ತಲುಪಿದ ವಾಸ್ತವ್ಯದ ಮನೆ ಮತ್ತು ಮಾಣಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಕಾಮಗಾರಿ ಮತ್ತು ಮಳೆ ನೀರು ಹರಿದುಹೋಗಲು ಸಮಸ್ಯೆ ಇರುವ ಚರಂಡಿ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶುಕ್ರವಾರ ಪರಿಶೀಲನೆ ನಡೆಸಿದರು. ಇದೇ ವೇಳೆ ಪೆರ್ನೆ ಗ್ರಾಮದಲ್ಲಿ ದೋರ್ಮೆಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ನೀರು ಹರಿದುಹೋಗಲು ಸಮಸ್ಯೆಯಾಗಿ ಕೃಷಿ ಭೂಮಿಗೆ ಹಾನಿಯಾದ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪರಿಶೀಲನೆ ನಡೆಸಿದರು.