ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರದಲ್ಲಿ ಮಂಗಳವಾರ ನಸುಕಿನ ಜಾವ ನಡೆದ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ದುರಂತ ಸಂಭವಿಸಿದೆ.
ಕಂಪೌಂಡ್ ಗೋಡೆ ಮನೆಯ ಗೋಡೆ ಮೇಲೆ ಉರುಳಿ ಈ ಸಾವು ಸಂಭವಿಸಿದೆ. ಮನೆಯೊಳಗೆ ವಾಸ್ತವ್ಯವಿದ್ದ ರಿಹಾನ ಮಂಝಿಲ್ ಮನೆಯ ಯಾಸಿರ್(45), ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಹಾನ (11)ಮತ್ತು ರಿಫಾನ (17) ಮೃತಪಟ್ಟಿದ್ದಾರೆ.
ರಾತ್ರಿ ಊಟ ಮುಗಿಸಿ ಮನೆಯ ಕೋಣೆಯಲ್ಲಿ ಮಲಗಿದ್ದ ಇಬ್ಬರು ಪುತ್ರಿಯರು ಹಾಗೂ ದಂಪತಿ ಬೆಳಗ್ಗಿನ ಹೊತ್ತಿಗೆ ಶವವಾಗಿದ್ದಾರೆ. ಧಾರಾಕಾರ ಮಳೆ ಸುರಿದ ಪರಿಣಾಮ ಕಂಪೌಂಡ್ ಗೋಡೆ ಹಾಗೂ ಎರಡು ಅಡಕೆ ಮರ ಯಾಸಿರ್ ಅವರ ಮನೆ ಮೇಲೆ ಉರುಳಿಬಿದ್ದಿದೆ. ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸ್ಥಳೀಯರು ಮೂರು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆದರೆ , ಅಗ್ನಿಶಾಮಕ ದಳ ಸ್ಥಳೀಯರ ಜೊತೆ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಕೊನೆಯ ಮೃತದೇಹವನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಸ್ಪೀಕರ್ ಯು.ಟಿ.ಖಾದರ್ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.