ಮಳೆ ಆರಂಭಗೊಂಡ ಬಳಿಕ ಕಳ್ಳರ ಚಿತ್ತ ಹಳ್ಳಿಯತ್ತ ನೆಟ್ಟಿದೆ. ಅಲ್ಲಿರುವ ಭಜನಾ ಮಂದಿರ, ದೈವದೇವರ ಗುಡಿಗಳನ್ನೂ ಬಿಟ್ಟಿಲ್ಲ. ಕಾಣಿಕೆಡಬ್ಬಿಯಲ್ಲಿರುವ ಸಣ್ಣ ಪುಟ್ಟ ಹಣವನ್ನೂ ಎಗರಿಸಿರುವ ಪ್ರಕರಣಗಳು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿರುವ ಪೊಯಿತಾಜೆ ಏರಮಲೆ ಶ್ರೀ ಕೋದಂಡ ರಾಮ ಭಜನಾ ಮಂದಿರದ ಮುಂಬಾಗಿಲು ಮುರಿದು ಮಂದಿರದೊಳಗೆ ಇದ್ದ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 3000 ಸಾವಿರ ರೂ ನಗದನ್ನು ಕಳವು ಮಾಡಲಾಗಿದೆ. ಕಪಾಟಿನ ಬಾಗಿಲು ಮುರಿದು ಅದರೊಳಗೆ ಇದ್ದ ಅಗತ್ಯವಾದ ಪತ್ರಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿ ಹೋಗಿದ್ದಾರೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳಕೋಡಿ ಎಂಬಲ್ಲಿರುವ ಶಿಶು ಮಂದಿರದೊಳಗೆ ನುಗ್ಗಿದ ಕಳ್ಳರು ಅದರಲ್ಲಿದ್ದ ಡಬ್ಬಿಯನ್ನು ಮುರಿದು ಸುಮಾರು 600 ರೂ ನಗದನ್ನು ದೋಚಿದ್ದಾರೆ. ನರಿಕೊಂಬು ಗ್ರಾಮದ ಅಂತರ ಎಂಬಲ್ಲಿರುವ ಸಾಲ್ಯಾನ್ ಕುಟುಂಬದ ತರವಾಡು ದೇವಸ್ಥಾನ ಇದ್ದು ಅದರ ಬಾಗಿಲು ಮುರಿದು ಒಳಪ್ರವೇಶ ಮಾಡಿದ ಕಳ್ಳರು ಕಾಣಿಕೆ ಡಬ್ಬಿ ಪುಡಿಗೈದು ಅದರಲ್ಲಿದ್ದ ಸುಮಾರು 1000 ಸಾವಿರ ನಗದು ಕಳವು ಮಾಡಿದ್ದಾರೆ.
ಬಾಳ್ತಿಲ ಗ್ರಾಮದ ಸುಧೆಕ್ಕಾರು ಎಂಬಲ್ಲಿರುವ ರಕ್ತೇಶ್ವರಿ ಗುಳಿಗ ನ ಗರ್ಭಗುಡಿಯ ಬಾಗಿಲ ಚಿಲಕ ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರು ಗರ್ಭಗುಡಿಯೊಳಗಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ, ಕಾಣಿಕೆ ಡಬ್ಬಿ ಒಡೆದು ಹಾಕಿ ಅದರಲ್ಲಿದ್ದ ಹಣ ಮತ್ತು ಭಜನೆಯಿಂದ ಹೊಂದಾಣಿಕೆ ಗೊಂಡ ಒಟ್ಟು 10,000 ನಗದನ್ನು ಕಳ್ಳರು ಎಗರಿಸಿದ್ದಾರೆ. ಈ ಪ್ರಕರಣಗಳೆಲ್ಲವೂ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಇದೀಗ ತನಿಖೆ ಸಾಗಿದೆ.