ರಾಜ್ಯ ಸರಕಾರ ಇಂಧನ ಬೆಲೆ ಏರಿಕೆಯನ್ನು ಶೀಘ್ರ ಹಿಂಪಡೆಯಬೇಕು ಎಂದು ಆಗ್ರಹಿಸಿ ತಾಲೂಕಿನ ವಿವಿಧ ವಾಹನ ಚಾಲಕ ಮಾಲೀಕರ ಸಂಘ ಜಂಟಿಯಾಗಿ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಸಿತು.
ರಿಕ್ಷಾ ಟೆಂಪೊ ಚಾಲಕ ಮಾಲೀಕರ ಸಂಘದ ಗೌರವಾಧ್ಯಕ್ಷ ರಾಜೇಶ್ ಬೊಳ್ಳುಕಲ್ಲು, ಟೂರಿಸ್ಟ್ ಟೆಂಪೋ ಚಾಲಕ, ಮಾಲಕ ಸಂಘದ ಅಧ್ಯಕ್ಷ ಸದಾನಂದ ಗೌಡ ನಾವೂರ, ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಮಣಿಹಳ್ಳ, ಕೃಷ್ಣ ಅಲ್ಲಿಪಾದೆ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.
ಟೂರಿಸ್ಟ್ ಕಾರು ಚಾಲಕ- ಮಾಲಕರ ಸಂಘ ಬಿ.ಸಿ.ರೋಡು, ಟೂರಿಸ್ಟ್ ವ್ಯಾನ್ ಚಾಲಕ- ಮಾಲಕರ ಸಂಘ, ಬಿಎಂಎಸ್ ರಿಕ್ಷಾ ಚಾಲಕ- ಮಾಲಕರ ಸಂಘ, ಸಣ್ಣ ಮತ್ತು ದೊಡ್ಡ ಗೂಡ್ಸ್ ಟೆಂಪೋ ಹಾಗೂ ಪಿಕಪ್ ಮಾಲಕರ ಸಂಘ, ಸಮಾನ ಬಿಎಂಬಿ ಸಂಘ ಬಿ.ಸಿ.ರೋಡು, ರಿಕ್ಷಾ ಡ್ರೈವರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಪ್ರತಿಭಟನೆ ನಡೆಯಿತು.
ಉಚಿತ ಭಾಗ್ಯಗಳನ್ನು ನೀಡುವ ನೆಪದಲ್ಲಿ ರಾಜ್ಯ ಸರಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಉಚಿತ ಭಾಗ್ಯಗಳಿಗಾಗಿ ಸಂಪನ್ಮೂಲಗಳನ್ನು ಬರಿದಾಗಿಸಿ ಈಗ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಕಂದಾಯ ಇಲಾಖೆಯಲ್ಲಿ ಎಲ್ಲಾ ಸೇವೆಗಳ ದರ ಏರೊಸಿದೆ. ವಿದ್ಯುತ್ ಇಲಾಖೆ, ಸಾರಿಗೆ ಇಲಾಖೆಯಲ್ಲಿ ಬೆಲೆ ಹೆಚ್ಚಳ ಮಾಡಿದೆ. ಅದೂ ಸಾಲದೆಂಬಂತೆ ಇಂದನ ದರದ ಬೆಲೆಯೇರಿಕೆ ಮಾಡಿ ದುಡಿದು ಜೀವನ ಸಾಗಿಸುವ ವಾಹನ ಚಾಲಕರು ಕಂಗಾಲಾಗಿದ್ದಾರೆ. ವಾಹನಗಳ ತೆರಿಗೆ ಹೆಚ್ಚಳ, ಇನ್ಸೂರೆನ್ಸ್ ಹೆಚ್ಚಳ, ಇಂಧನ ದರ ಏರಿಕೆ ಇವುಗಳಿಂದಾಗಿ ವಾಹನಗಳನ್ನು ಇಟ್ಟುಕೊಳ್ಳುವಂತೆಯೂ ಇಲ್ಲ, ಮಾರಾಟ ಮಾಡುವಂತೆಯೂ ಇಲ್ಲ. ಇದರಿಂದ ಬಡ ಚಾಲಕರು ಅತಂತ್ರರಾಗಿದ್ದಾರೆ . ಆದ್ದರಿಂದ ಸರಕಾರ ಇಂಧನ ದರವನ್ನು ಪೂರ್ಣ ಪ್ರಮಾಣದಲ್ಲಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬಿಎಂಎಸ್ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್, ಟಾಂಟಾಂ ಬಿಎಂಬಿ ಸಂಘದ ಸುರೇಶ್ ಪೂಜಾರಿ, ಟೂರಿಸ್ಟ್ ಕಾರು ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್, ಪಿಕಪ್ ಚಾಲಕ,ಮಾಲಕ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ್, ಪ್ರಭಾಕರ ದೈವಗುಡ್ಡೆ, ಪದಾಧಿಕಾರಿಗಳಾದ ಕೃಷ್ಣಅಲ್ಲಿಪಾದೆ, ನಾರಾಯಣ, ಪ್ರಕಾಶ್, ಶ್ರೀಕಾಂತ್ ಪಾಣೆಮಂಗಳೂರು, ಹರೀಶ್ ಮತ್ತಿತರರಿದ್ದರು. ಬಳಿಕ ತಾಲೂಕಾಡಳಿತ ಕಚೇರಿಯ ವರೆಗೆ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಬಂದ ಪ್ರತಿಭಟನಕಾರರು ತಹಸೀಲ್ದಾರರ ಮೂಲಕ ಸರಕಾರಕ್ಕೆಮನವಿ ಸಲ್ಲಿಸಿದರು.