ಬಂಟ್ವಾಳ ಯೋಜನಾ ಪ್ರಾಧಿಕಾರದ ಮೂಲಕ ಪ್ರಾಮಾಣಿಕವಾಗಿ, ಭ್ರಷ್ಟಾಚಾರ ಮುಕ್ತ ವಾತಾವರಣದೊಂದಿಗೆ ಜನರ ಸೇವೆ ನಡೆಸುವುದಾಗಿ ಹೇಳಿರುವ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ವಾರ್ಷಿಕ ಬಜೆಟ್ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು ಪ್ರಾಧಿಕಾರದಲ್ಲಿ ಒಟ್ಟು ನಾಲ್ಕು ಕೋಟಿ ರೂ ಹಣವನ್ನು ಡೆಪಾಸಿಟ್ ಮಾಡಲಾಗಿದೆ. ಇದರ ಮುಖಾಂತರ ಪುರಸಭಾ ವ್ಯಾಪ್ತಿಯಲ್ಲಿರುವ ಒಟ್ಟು ಮೂರು ಕೆರೆಗಳನ್ನು ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಅಭಿವೃದ್ಧಿ ಮಾಡಲು ಸಭೆಯಲ್ಲಿ ನಿರ್ಣಯ ಮಾಡಿದ್ದೇವೆ ಎಂದರು. 2.50 ಎಕರೆಯಲ್ಲಿ ಅರ್ಭಿಗುಡ್ಡೆ ಕೆರೆ, 45 ಸೆಂಟ್ಸ್ ವ್ಯಾಪ್ತಿಯಲ್ಲಿ ನರಹರಿ ಪರ್ವತ ಹಾಗೂ 18 ಸೆಂಟ್ಸ್ ಜಾಗದಲ್ಲಿ ಬೋಳಂಗಡಿಯಲ್ಲಿ ಕೆರೆಗಳಿದ್ದು ಇದರ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು. ಇದಲ್ಲದೆ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಲವು ಕೆಲಸ ಕಾರ್ಯಗಳನ್ನು ಬುಡಾ ಪರಿಮಿತಿಗೆ ಒಳಪಟ್ಟು ನಿರ್ವಹಿಸುವುದಾಗಿ ಹೇಳಿದ ಅವರು, ಮಾಜಿ ಸಚಿವ ಬಿ.ರಮಾನಾಥ ರೈ ಅವರ ಕನಸಿನ ಖಾಸಗಿ ಬಸ್ ಸ್ಟ್ಯಾಂಡ್ ನಿರ್ಮಾಣವೂ ಇದರಲ್ಲಿ ಸೇರಿದೆ ದರು. ಈ ಸಂದರ್ಭ ಬುಡಾ ಸದಸ್ಯರಾದ ಮನೋಹರ ನೇರಂಬೋಳು, ರಝಾಕ್, ಹರೀಶ್, ಪ್ರಾಧಿಕಾರದ ಕಾರ್ಯದರ್ಶಿ ಅಭಿಲಾಷ್ ಉಪಸ್ಥಿತರಿದ್ದರು.