ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಸರಕಾರಿ ಪ್ರೌಢ ಶಾಲಾ ಮಕ್ಕಳಿಗೆ ಯಕ್ಷಧ್ರುವ ಯಕ್ಷ ಶಿಕ್ಷಣ ಎನ್ನುವ ವಿಶೇಷ ಕಾರ್ಯಯೋಜನೆಯನ್ವಯ ಎರಡನೇ ಅವಧಿಯ ಶೈಕ್ಷಣಿಕ ಸಾಲಿನ ಯಕ್ಷ ಶಿಕ್ಷಣವನ್ನು ಮಂಚಿ ಕೊಳ್ನಾಡು ಪ್ರೌಢಶಾಲಾ ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿ ಕುಕ್ಕಾಜೆ ಕೃಷ್ಣರಾಜ ರೈ ಉದ್ಘಾಟಿಸಿದರು.
ಓರ್ವ ವ್ಯಕ್ತಿಯ ಬದುಕಿನಲ್ಲಿ ತಿರುವನ್ನು ನೀಡಬಲ್ಲ , ವಾಕ್ಚಾತುರ್ಯ ಹಾಗೂ ಭಾವಾಭಿನಯ ಪ್ರಾಧಾನ್ಯವಾದ ಯಕ್ಷಗಾನ ಕಲೆಯು ಕರಾವಳಿ ಭಾಗದ ಗಂಡು ಕಲೆಯಾಗಿದೆ. ವಿವಿಧ ಸ್ಧಿತ್ಯಂತರಗಳನ್ನು ದಾಟುತ್ತಾ ವೈವಿಧ್ಯ ಆಯಾಮಗಳನ್ನು ಯಕ್ಷಗಾನದಲ್ಲಿ ಕಂಡಿದ್ದೇವೆ. ಭವಿಷ್ಯದ ಜನಾಂಗ ಯಕ್ಷಗಾನ ರಂಗವನ್ನು ಕಾಪಾಡಿಕೊಂಡು ದಾಟಿಸುವ ಪ್ರಯತ್ನಕ್ಕೆ ಯಕ್ಷಧ್ರುವ ಯಕ್ಷ ಶಿಕ್ಷಣ ದೊಡ್ಡ ಕ್ರಾಂತಿಯನ್ನು ಮಾಡಿದೆ ಎಂದವರು ಹೇಳಿದರು.
ಪಟ್ಲ ಫೌಂಡೇಶನ್ ವಿಟ್ಲ ಘಟಕದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಜಾತಿ ಮತಗಳನ್ನು ಮೀರಿ ಬೆಳೆದ ಯಕ್ಷಗಾನಕ್ಕೆ ಎಲ್ಲಾ ವರ್ಗದ ಅಭಿಮಾನಿಗಳು ಹಿತೈಷಿಗಳು ಪೋಷಕರಾಗಿದ್ದಾರೆ ಎಂದರು.
ಯಕ್ಷಗಾನ ಗುರುಗಳಾಗಿ ಕಲಾವಿದ ಅಶ್ವತ್ ಮಂಜನಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅಧ್ಯಕ್ಷತೆಯನ್ನು ಮಂಚಿ ಕೊಳ್ನಾಡು ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಸೆರ್ಕಳ, ಅತಿಥಿಗಳಾಗಿ ನೂಜಿಬೈಲು ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕಿ ಅನುಸೂಯ ರಾವ್, ಹಿರಿಯ ವಿದ್ಯಾರ್ಥಿ ಹಾಗೂ ಪ್ರಗತಿಪರ ಕೃಷಿಕ ನಿಶ್ಚಲ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶಿವಶಂಕರ ರಾವ್, ಕಲಾವಿದ ತಾರಾನಾಥ್ ಕೈರಂಗಳ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಸುಶೀಲ ವಿಟ್ಲ ವಂದಿಸಿ, ಕನ್ನಡ ಭಾಷಾ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರ್ವಹಿಸಿದರು.