ಮುಂಬಯಿಯ ಛತ್ರಪತಿ ಶಿವಾಜಿ ಮಹರಾಜ್ ವಸ್ತುಸಂಗ್ರಹಾಲಯ ಒರಿಗಾಮಿ ಕಲಾಕೃತಿಗಳನ್ನೊಳಗೊಂಡ “ಒರಿಗಮಿ ಬಸ್” ಇಂದು ಬಂಟ್ವಾಳ ತಾಲೂಕಿಗೆ ಆಗಮಿಸಿದ್ದು, ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಶಾಲಾಮಕ್ಕಳು ಹಾಗೂ ಸಾರ್ವಜನಿಕರ ವೀಕ್ಷಣೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಚಾಲನೆ ನೀಡಿದರು. ರೋಟರಿ ಕ್ಲಬ್ ಪ್ರಮುಖರಾದ ಮಂಜುನಾಥ ಆಚಾರ್ಯ, ಪ್ರಕಾಶ್ ಬಾಳಿಗಾ, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಬಿಇಒ ಮಂಜುನಾಥನ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಬಲ್ಲಾಳ್ ಸಹಿತ ಪ್ರಮುಖರು ಹಾಜರಿದ್ದರು. ಸಂಸಾರ ಜೋಡುಮಾರ್ಗದ ಮೌನೇಶ ವಿಶ್ವಕರ್ಮ ನಿರ್ವಹಿಸಿದರು. ಒರಿಗಾಮಿ ಒಂದು ರೀತಿಯ ಕಾಗದದ ಕಲೆಯಾಗಿದ್ದು ಅದು ಜಪಾನ್‌ನಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ. ‘ಕಾಗದವನ್ನು ವಿಧವಿಧ ರೀತಿಯಲ್ಲಿ ಮಡಚಿ ಅದರಲ್ಲಿ ವಿಶಿಷ್ಟವಾದ ಆಕಾರಗಳು ಮತ್ತು ಶಿಲ್ಪಗಳನ್ನು ರಚಿಸುವುದು ಈ ಒರಿಗಮಿ ಕಲೆಯ ವೈಶಿಷ್ಟ್ಯತೆ. ಈ ಒರಿಗಮಿ ಬಸ್ಸಿನಲ್ಲಿ ಗಣಿತ, ವಾಸ್ತುಶಿಲ್ಪ, ಇಂಜಿನಿಯರಿಂಗ್ ಸಹಿತ ಒರಿಗಮಿ ಕಲೆಯ ವಿವಿಧ ಸಾಧ್ಯತೆಗಳನ್ನು ತಿಳಿಸುವ ಪ್ರಯತ್ನ ನಡೆಸಲಾಗಿದೆ.