ಪೊಳಲಿ ರಾಮಕೃಷ್ಣ ತಪೋವನ ವತಿಯಿಂದ ಪಲ್ಲಿಪಾಡಿ ಎಂಬಲ್ಲಿ ಪ್ರಕೃತಿ ರಮಣೀಯ 6 ಎಕರೆ ಜಮೀನಿನಲ್ಲಿ ರೂ 75 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ‘ರಾಮಕೃಷ್ಣ ವಿದ್ಯಾದೇಗುಲ’ಕ್ಕೆ ಇದೇ 16ರಂದು ಬೆಳಿಗ್ಗೆ ಗಂಟೆ 8.30ಕ್ಕೆ ಭೂಮಿ ಪೂಜೆ ನೆರವೇರಲಿದೆ ಎಂದು ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಹೇಳಿದ್ದಾರೆ.
ಪೊಳಲಿ ತಪೋವನದಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಶಿಕ್ಷಣ ಸಂಸ್ಥೆಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ಮಕ್ಕಳಿಗೆ ಬಾಲ್ಯದಿಂದಲೇ ಆಧುನಿಕತೆ ಸ್ಪರ್ಶದ ಜೊತೆಗೆ ಗುರುಕುಲ ಮಾದರಿ ಶಿಕ್ಷಣ ನೀಡಿದಾಗ ಮಾತ್ರ ಅವರು ಸಂಸ್ಕಾರವಂತರಾಗಿ ಬೆಳೆಯಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.
ಇದೇ 16ರಂದು ಬೆಳಿಗ್ಗೆ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಶಿಲಾನ್ಯಾಸ ನೆರವೇರಿಸಲಿದ್ದು, ನಿಟ್ಟೆ ವಿಶ್ವವಿದ್ಯಾಲಯ ಕುಲಪತಿ ಎನ್.ವಿನಯ ಹೆಗ್ಡೆ, ಹೋಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿ ಬಂಜಾರ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ ನಾಯ್ಕ್ ಉಳಿಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಬಡಗಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ರೂಪಶ್ರೀ, ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ರಾಧಾ ಲೋಕೇಶ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.
ಈಗಾಗಲೇ ಸ್ಥಳೀಯ ವಿದ್ಯಾಭಿಮಾನಿಗಳು ಸೇರಿದಂತೆ ವಿವಿಧ ಉದ್ಯಮಿಗಳು ಮತ್ತು ದಾನಿಗಳ ನೆರವಿನಲ್ಲಿ ಈ ವಿದ್ಯಾದೇಗುಲ ನಿಮರ್ಾಣ ಸಮಿತಿ ರಚಿಸಲಾಗಿದೆ. ಬಾಲಕರಿಗೆ ವಿದ್ಯಾರ್ಥಿನಿಲಯ ಸಹಿತ ಎಲ್.ಕೆ.ಜಿ.ಯಿಂದ ದ್ವಿತೀಯ ಪಿಯೂಸಿ ತನಕ ಎಲ್ಲಾ ಜಾತಿ, ಧರ್ಮಗಳ ಭೇದವಿಲ್ಲದೆ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ ಎಂದರು.
ಇಲ್ಲಿನ ವಿದ್ಯಾರ್ಥಿಗಳನ್ನು ಬಹುಭಾಷಾ ಪರಿಣತಿಗೊಳಿಸಿ, ಶಿಕ್ಷಣ, ಕ್ರೀಡೆ, ವೇದಾಧ್ಯಯನ ಸಹಿತ ಸಮಾಜಕ್ಕೆ ಅಪರ್ಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕರಿಯಂಗಳ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ತಪೋವನದ ಪ್ರಮುಖರಾದ ಚಂದ್ರಹಾಸ ಪಲ್ಲಿಪಾಡಿ ಮಾಹಿತಿ ನೀಡಿದರು.