ಬಂಟ್ವಾಳ: ಸ್ಮಾರ್ಟ್ ಗೈಸ್ ಕೈಕಂಬ, ಅಂಬೇಡ್ಕರ್ ಯುವವೇದಿಕೆ ಬಂಟ್ವಾಳ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಸಹಭಾಗಿತ್ವದಲ್ಲಿ ಸಮಾಜಮುಖಿ, ಮಾನವತಾವಾದಿ, ಅಂಬೇಡ್ಕರ್ ಚಿಂತಕ, ಉಚಿತ ಸಾಮೂಹಿಕ ವಿವಾಹದ ರೂವಾರಿ ದಿ.ರಾಜ ಪಲ್ಲಮಜಲು ಅವರು ನಿಧನ ಹೊಂದಿ 3ನೇ ವರ್ಷದ ಸ್ಮರಣಾರ್ಥ, ನುಡಿನಮನ, ಪ್ರತಿಭಾ ಪುರಸ್ಕಾರ ಮತ್ತು ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಎಸ್.ಜಿ.ಕೆ. ಟ್ರೋಫಿ 2024 ಕಾರ್ಯಕ್ರಮಗಳು ಜೂನ್ 15ರಂದು ಸಂಜೆ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ.
ಈ ವಿಷಯವನ್ನು ಸಂಘಟಕ, ಸ್ಮಾರ್ಟ್ ಗೈಸ್ ಕೈಕಂಬ ಹಾಗೂ ಅಂಬೇಡ್ಕರ್ ಯುವವೇದಿಕೆ ಅಧ್ಯಕ್ಷ ಪ್ರೀತಿರಾಜ್ ದ್ರಾವಿಡ್ ಹಾಗೂ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್ ಸಮಾಜಸೇವಾ ಸಂಘದ ಅಧ್ಯಕ್ಷ ಸತೀಶ್ ಅರಳ ಮತ್ತು ಬಂಟ್ವಾಳ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಸ್ಪೀಕರ್ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ ಮತ್ತು ಮೈಸೂರಿನ ಶ್ರೀ ಬಸವಧ್ಯಾನ ಮಂದಿರದ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಉದ್ಘಾಟಿಸುವರು. ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಅಶೋಕ್ ಕುಮಾರ್ ರೈ, ಭಾಗೀರಥಿ ಮುರುಳ್ಯ, ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ ಸಹಿತ ಪ್ರಮುಖರು ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ನುಡಿನಮನ, ಪ್ರತಿಭಾ ಪುರಸ್ಕಾರ, ರಾಜಪಲ್ಲಮಜಲು ಅವರ ಆತ್ಮಚರಿತ್ರೆ ಕಿರುಹೊತ್ತಗೆ ಬಿಡುಗಡೆ, ಸಂಗೀತ ರಸಮಂಜರಿ ನಡೆಯಲಿದ್ದು, ಬಳಿಕ ಮ್ಯಾಟ್ ಕಬಡ್ಡಿ ಪಂದ್ಯಾಟ ಆರಂಭಗೊಳ್ಳಲಿದೆ ಎಂದರು. ಈಗಾಗಲೇ 20ಕ್ಕೂ ಅಧಿಕ ತಂಡಗಳು ನೋಂದಾಯಿತವಾಗಿದ್ದು, ಈ ಮಳೆಗಾಲ ಸೀಸನ್ ನ ಪ್ರಥಮ ಮ್ಯಾಟ್ ಕಬಡ್ಡಿ ಇದಾಗಿದ್ದು, ಅಂತರ್ಜಿಲ್ಲಾ ಮಟ್ಟದ ಪುರುಷರ ಮುಕ್ತ 60 ಕೆಜಿ ವಿಭಾಗದ ಪ್ರೊ ಮಾದರಿಯ ಪಂದ್ಯಾಟವಾಗಲಿದೆ ಎಂದು ಬೇಬಿ ಕುಂದರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮಹಮ್ಮದ್ ನಂದಾವರ, ಪುನೀತ್ ರಾಜ್ ಉಪಸ್ಥಿತರಿದ್ದರು.