ಬಂಟ್ವಾಳ: ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನಕ್ಕೆ ಮನವಿಯನ್ನು ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾಡಿದ್ದಾರೆ.
ಕೇಂದ್ರ ಸರಕಾರ ಜಾರಿಗೊಳಿಸಿದ ರಾಜ್ಯ ಸರಕಾರದ ಸಹಬಾಗಿತ್ವದ ಮಹತ್ವಾಕಾಂಕ್ಷಿ ಯೋಜನೆಯಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿಯಲ್ಲಿ ಕರಾವಳಿಯ ಬಹುತೇಕ ಅಡಿಕೆ ಬೆಳೆಗಾರರಿಗೆ ಹಾಗೂ ಕರಿಮೆಣಸು ಬೆಳೆಗಾರರಿಗೆ ಹವಾಮಾನ ವೈಪರೀತ್ಯದಿಂದಾಗಿ ನಷ್ಟ ಸಂಭವಿಸಿದ ಸಂದರ್ಭ ರೈತರ ಬಾಳಿನಲ್ಲಿ ಬೆಳಕು ಚೆಲ್ಲುವ ಯೋಜನೆಯಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ವರ್ಷಂಪ್ರತಿ ಸಾವಿರಾರು ರೈತರಿಗೆ ಬೆಳೆ ವಿಮೆ ಪರಿಹಾರ ಮೊತ್ತ ಬಿಡುಗಡೆಯಾಗುತ್ತಿದ್ದು , 2024-25 ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಸದ್ರಿ ಯೋಜನೆಯನ್ನು ಶೀಘ್ರವಾಗಿ ಅನುಷ್ಟಾನಗೊಳಿಸಿ, ಯೋಜನೆಯಲ್ಲಿ ರೈತರಿಗೆ ನೋಂದಣೆ ಮಾಡಲು 60 ದಿನಗಳ ಕಾಲಾವಕಾಶ ನೀಡಬೇಕಾಗುತ್ತದೆ. ಇದರಿಂದಾಗಿ ಸ್ಥಳೀಯ ಪ್ರಾಥಮಿಕ ಸಹಕಾರ ಸಂಘಗಳಿಗೆ ಹೆಚ್ಚಿನ ರೈತರನ್ನು ಈ ಯೋಜನೆಗೆ ಒಳಪಡಿಸಲು ಅನೂಕೂಲವಾಗುತ್ತದೆ ಎಂದವರು ಮಾಹಿತಿ ನೀಡಿದ್ದಾರೆ.
ಈ ಯೋಜನೆ ಸಂಬಂಧ ರೈತರು ದಿನಂಪ್ರತಿ ಪ್ರಾಥಮಿಕ ಸಹಕಾರ ಸಂಘಗಳಿಗೆ ಕಛೇರಿಗಳಿಗೆ ಸಂಪರ್ಕಿಸಿ ಯೋಜನೆ ಸಂಬಂಧ ಬೆಳೆ ವಿಮೆ ಕಂತು ಪಾವತಿಸುವ ಬಗ್ಗೆ ವಿಚಾರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರೈತ ಪರವಾಗಿರುವ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ಅನುಷ್ಠಾನಗೊಳಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನನೀಡಬೇಕಾಗಿ ವಿನಂತಿಸಿದ್ದಾರೆ.