ಬಾಲಕಾರ್ಮಿಕ ಪದ್ದತಿ ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರಾದ ನಮ್ಮೆಲ್ಲರ ಮೇಲಿದೆ ಎಂದು ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಸುಬ್ರಹ್ಮಣ್ಯ ಭಟ್ ಹೇಳಿದರು.
ಬುಧವಾರ ತುಂಬೆ ಕಾಲೇಜಿನಲ್ಲಿ ನಡೆದ ಬಾಲಕಾರ್ಮಿಕ ವಿರೋಧಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತ ಸಂದೀಪ್ ಸಾಲ್ಯಾನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಬಡತನ, ಅನಕ್ಷರತೆಯಿಂದಾಗಿ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ದುಡಿಸುವ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ, ಇದರಿಂದಾಗಿ ಮಕ್ಕಳ ಬಾಲ್ಯ ಕಳೆದು ಹೋಗಿ, ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಕುಂಠಿತಗೊಂಡು ದೇಶದ ಅಭಿವೃದ್ದಿಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಆದ್ದರಿಂದ ಪೆನ್ನು ಪುಸ್ತಕ ಹಿಡಿಯುವ ಕೈ ಕಾರ್ಖಾನೆಯ ಯಂತ್ರಗಳನ್ನು ಹಿಡಿಯದಂತೆ ಎಚ್ಚರ ವಹಿಸುವ ಸಂಕಲ್ಪ ತೊಡಬೇಕಾಗಿದೆ ಎಂದರು.
ಕಾಲೇಜಿನ ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್ ಮಾತನಾಡಿ ಮಕ್ಕಳು ಕಾರ್ಮಿಕರಾಗಿ ದುಡಿಯುವುದು ಕಾನೂನು ಪ್ರಕಾರ ಅಪರಾಧವಾಗಿದ್ದು ಅಂತಹ ಪ್ರಕರಣಗಳು ಕಂಡು ಬಂದಾಗ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಈ ಸಾಮಾಜಿಕ ಪಿಡುಗನ್ನು ನಿವಾರಿಸಲು ಕೈ ಜೋಡಿಸಬೇಕು ಎಂದರು.
ಉಪನ್ಯಾಸಕಿ ಪ್ರಪುಲ್ಲ ಶೆಟ್ಟಿ ಸ್ವಾಗತಿಸಿದರು, ಶ್ರೀ ಪ್ರಜ್ಞಾ ಪ್ರಾಸ್ತವಿಕವಾಗಿ ಮಾತನಾಡಿದರು, ಉಪನ್ಯಾಸಕರಾದ ಕವಿತಾ ಕೆ. ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ವಿಶ್ವನಾಥ ಪೂಜಾರಿ ವಂದಿಸಿದರು. ಅಬ್ದುಲ್ ರಹಿಮಾನ್ ಡಿ.ಬಿ. ಕಾರ್ಯಕ್ರಮ ನಿರೂಪಿಸಿದರು.