ಕಲ್ಲಡ್ಕದಲ್ಲಿ ತೀವ್ರ ಹದಗೆಟ್ಟು ಹೆದ್ದಾರಿಯನ್ನು ವಾರದೊಳಗೆ ಸರಿಪಡಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಭೆಯಲ್ಲಿ ಹೇಳಿದ ತರುವಾಯ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಬುಧವಾರ ಕಲ್ಲಡ್ಕ ಹೆದ್ದಾರಿಯ ಕಾಮಗಾರಿ ವೀಕ್ಷಿಸಿ, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಸ್ಥಳೀಯರು ಹೆದ್ದಾರಿ ಕಾಮಗಾರಿ ನಿರ್ಮಾಣ ಸಂದರ್ಭ ಆಗುತ್ತಿರುವ ತೊಂದರೆಗಳನ್ನು ವಿವರಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು. ಮುಂಗಾರು ಆರಂಭಗೊಳ್ಳುವ ಮುನ್ನವೇ ನಾನು ಸೂಚನೆಗಳನ್ನು ಕೊಟ್ಟಿದ್ದೆ. ವಿಟ್ಲ ಸರ್ಕಲ್ ವರೆಗೆ ನೀರು ಹರಿದುಹೋಗುವ ಕೆಲಸಗಳನ್ನು ಮಾಡಲಾಗಿದೆ. ಜನರು ಮಾರ್ಗ ದಾಟಲು ಅನುಕೂಲವಾಗುವಂತೆ ಕ್ರಾಸಿಂಗ್ ಪಾಯಿಂಟ್ ಮಾಡುವ ಕುರಿತು ಸೂಚನೆ ನೀಡಲಾಗಿದೆ. ಮುಂಗಾರುಪೂರ್ವದಲ್ಲಿ ಇದನ್ನು ಮಾಡಬೇಕಾಗಿತ್ತು. ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮಗಳನ್ನು ಕೈಗೊಳ್ಳಲು ಸೂಚನೆಯನ್ನು ನೀಡಿದ್ದೇನೆ ಎಂದು ಈ ಸಂದರ್ಭ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಕಂಬಗಳ ಸಮೀಪ ನೀರು ಹರಿದುಹೋಗಲು ವ್ಯವಸ್ಥೆ ಕಲ್ಪಿಸುವುದು, ಪಾದಚಾರಿಗಳು ದಾಟಲು ನಾಲ್ಕು ಕಡೆ ಜಾಗ, ಹಾಗೂ ಅನಗತ್ಯ ಕಡೆಗಳಲ್ಲಿ ರಾಶಿ ಹಾಕಲಾದ ಕಲ್ಲುಗಳು, ಮಣ್ಣ ರಾಶಿ ತೆರವು, ಸರ್ವೀಸ್ ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್, ನಾನಾ ಇಲಾಖೆಗಳ ಅಧಿಕಾರಿಗಳು, ಸಿಬಂದಿ ಈ ಸಂದರ್ಭ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಬುಧವಾರ ಕಲ್ಲಡ್ಕ ಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ನಿರ್ಮಾಣ, ಪಾದಾಚಾರಿಗಳು ದಾಟಲು ನಾಲ್ಕು ಕಡೆ ಕಾಲುದಾರಿ ನಿರ್ಮಾಣ, ತ್ಯಾಜ್ಯಗಳನ್ನು ತೆಗೆಯುವುದು ಹಾಗೂ ಹೆದ್ದಾರಿ ಸಮತಟ್ಟುಗೊಳಿಸಲು ನಿರಂತರವಾಗಿ ವೆಟ್ ಮಿಕ್ಸ್ ಹಾಕಲು ಹೆದ್ದಾರಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳು ಸ್ವತಃ ಸ್ಕೂಟರ್ ನಲ್ಲಿ ಸಂಚರಿಸಿ ಹೆದ್ದಾರಿ ಸ್ಥಿತಿಗತಿ ಖುದ್ದು ವೀಕ್ಷಿಸಿದರು.