ಸಂವಾದ ಕಾರ್ಯಕ್ರಮ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿಯವರೊಂದಿಗೆ ಒಂದು ಸಂಜೆ ಎಂಬ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಭಾನುವಾರ ಸಂಜೆ ಅಭಿರುಚಿ ಜೋಡುಮಾರ್ಗ ವತಿಯಿಂದ ನಡೆಯಿತು.
ಈ ಸಂದರ್ಭ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ಮಹಾಭಾರತ ಯಾತ್ರೆ ಕುರಿತು ಅವಲೋಕನ, ಸಂವಾದ, ಗೌರವಾರ್ಪಣೆ ನಡೆಯಿತು. ಬಳಿಕ ಗುರುರಾಜ ಮಾರ್ಪಳ್ಳಿ ಮತ್ತು ಬಳಗದಿಂದ ಬಡಗುತಿಟ್ಟು ಪ್ರಯೋಗ ಋತುಪರ್ಣ ಪ್ರದರ್ಶನಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ವಹಿಸಿ, ತೋಳ್ಪಾಡಿ ಅವರ ಒಡನಾಟದ ಕುರಿತು ತನ್ನ ಅನುಭವವನ್ನು ಹಂಚಿಕೊಂಡರು. ಈ ಸಂದರ್ಭ ಮಾತನಾಡಿದ ಲಕ್ಷ್ಮೀಶ ತೋಳ್ಪಾಡಿ, ಇಂದು ಅಭಿರುಚಿ ಜೋಡುಮಾರ್ಗದಿಂದ ಉಳಿಸಿ, ಬೆಳೆಸಿ ಹಾಗೂ ಹಂಚುವ ಕಾರ್ಯ ಆಗುತ್ತಿದೆ, ಅದು ಇಂದು ಅಗತ್ಯ ಎಂದರು. ಮುಖ್ಯ ಅತಿಥಿಗಳಾಗಿ ಲೇಖಕ ಪೃಥ್ವೀರಾಜ್ ಕವತ್ತಾರ್ ಭಾಗವಹಿಸಿ ಮಾತನಾಡಿ, ಶಿವರಾಮ ಕಾರಂತರಷ್ಟೇ ತೋಳ್ಪಾಡಿಯವರು ಹೆಸರು ಮಾಡಿದ್ದು, ಮಹಾಭಾರತದಂಥ ಕೃತಿಗಳ ಬೆಳವಣಿಗೆಯಲ್ಲಿ ತೋಳ್ಪಾಡಿ ಅವರ ಪಾತ್ರ ಪ್ರಮುಖವಾದುದು ಎಂದರು.
ಸೃಷ್ಟಿಶೀಲವಾದುದು ಮಹಾಭಾರತ:ಸಂವಾದ ಕಾರ್ಯಕ್ರಮದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ ಭಟ್ಟ, ರಂಗಕರ್ಮಿ ಮೂರ್ತಿ ದೇರಾಜೆ, ಕೃಷಿಕ ಲೇಖಕ ವಸಂತ ಕಜೆ, ಅಭಿರುಚಿ ಅಧ್ಯಕ್ಷ ಎಚ್. ಸುಂದರ ರಾವ್, ಮೋಹನ ಪೈ ಪಾಣೆಮಂಗಳೂರು ಹಾಗೂ ಉಪನ್ಯಾಸಕ ಚೇತನ್ ಮುಂಡಾಜೆ ಪಾಲ್ಗೊಂಡರು. ಈ ಸಂದರ್ಭ ಮಹಾಭಾರತದ ಪಾತ್ರಗಳ ವ್ಯಕ್ತಿತ್ವ, ವಿಸ್ತಾರದ ಕುರಿತು ಮೂಡಿದ ಜಿಜ್ಞಾಸೆಗಳಿಗೆ ಉತ್ತರಿಸಿದ ಲಕ್ಷ್ಮೀಶ ತೋಳ್ಪಾಡಿ, ಮಹಾಭಾರತ ದಟ್ಟ ಲೌಕಿಕತೆಯೊಂದಿಗೆ ಅಷ್ಟೇ ಆಧ್ಯಾತ್ಮಿಕವಾಗಿರುವ ಕೃತಿಯಾಗಿದೆ. ಸೃಷ್ಟಿಶೀಲವಾದುದು ಮಹಾಭಾರತ ಎಂದರು. ವ್ಯವಸ್ಥಾತ್ಮಕವಾದ ಚಿಂತನೆಗೆ ರೂಪಾಂತರವನ್ನು ಅನುಭವಿಸುವ ಸಾಮರ್ಥ್ಯ ಕಡಿಮೆ ಎಂದು ಹೇಳಿದ ತೋಳ್ಪಾಡಿ, ಹಲವು ಸಂದೇಹಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. ಅಭಿರುಚಿ ಜೋಡುಮಾರ್ಗ ಕಾರ್ಯದರ್ಶಿ ಮಹಾಬಲೇಶ್ವರ ಹೆಬ್ಬಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ರಾಧೇಶ ತೋಳ್ಪಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಚೇತನ್ ಮುಂಡಾಜೆ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು.