ಬಂಟ್ವಾಳ

‘ಸಾಹಿತ್ಯ, ಯಕ್ಷಗಾನಕ್ಕೆ ದೇರಾಜೆ, ಏರ್ಯರ ಒಡನಾಟದ ಕೊಡುಗೆ ಅನನ್ಯ’

ಏರ್ಯಬೀಡಿನಲ್ಲಿ ದೇರಾಜೆ – ಏರ್ಯ ನೆನಪಿನ ಕ್ಷಣಗಳು ಕಾರ್ಯಕ್ರಮದಲ್ಲಿ ಅಭಿಮಾನಿಗಳ ಅಭಿಮತ

ಏರ್ಯ ಆನಂದಿ ಆಳ್ವ ಅವರನ್ನು ಗೌರವಿಸಲಾಯಿತು.

ಬಂಟ್ವಾಳ: ಮೊಡಂಕಾಪು ಸಮೀಪ ಏರ್ಯಬೀಡಿನಲ್ಲಿ ಹಿರಿಯ ಸಾಹಿತಿ, ವಿದ್ವಾಂಸದ್ವಯರಾದ ದಿ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಹಾಗೂ ದಿ. ದೇರಾಜೆ ಸೀತಾರಾಮಯ್ಯ ಅವರ ಒಡನಾಟದ ಸಂಸ್ಮರಣೆ ‘ಏರ್ಯಬೀಡಿನಲ್ಲಿ ದೇರಾಜೆ – ಏರ್ಯ ನೆನಪಿನ ಕ್ಷಣಗಳು’ ಕಾರ್ಯಕ್ರಮ ಮೇ.23ರಂದು ಸಂಜೆ ನಡೆಯಿತು.

ದೇರಾಜೆ ಸೀತಾರಾಮಯ್ಯ ಸಂಸ್ಮರಣಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಪತ್ನಿ ಏರ್ಯ ಆನಂದಿ ಆಳ್ವ ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ಉಭಯ ಸಾಹಿತಿಗಳ ಕುರಿತು ಮಾತನಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ ಭಟ್ಟ, ಏರ್ಯ ಮತ್ತು ದೇರಾಜೆ ಸೀತಾರಾಮಯ್ಯ ಇಬ್ಬರೂ ಯಕ್ಷಗಾನ ಸಾಹಿತ್ಯಕ್ಕೆ ನೀಢಿದ ಕೊಡುಗೆ ಅನನ್ಯವಾದುದು. ಏರ್ಯ ಅವರಿಗೆ ಸಾಹಿತ್ಯ, ಸಂಸ್ಕೃತಿ ಕಲೆಗಳ ಮೇಲಿನ ಪ್ರೀತಿ ಅಗಾಧವಾಗಿತ್ತು. ಅವರು ಸಮಾಜಮುಖಿಯಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿದಿದ್ದು, ಉತ್ಸಾಹ ಗಮನಾರ್ಹ. ಕಲೆಯ ರಸದ ಬಗ್ಗೆ ಇದ್ದಂಥ ಒಲವು ದೇರಾಜೆ ಸೀತಾರಾಮಯ್ಯ ಅವರೆಡೆ ಸೆಳೆದಿತ್ತು. ಮಾತು ಮತ್ತು ಬರೆಹಗಳ ಮೂಲಕ ಶ್ರೇಷ್ಠವಾದ ಸಾಹಿತ್ಯ ಸೃಷ್ಟಿ ಮಾಡಿರುವುದು ದೇರಾಜೆ ಸಾಧನೆಯಾಗಿತ್ತು ಎಂದರು ದೇರಾಜೆಯವರ ಕುರುಕ್ಷೇತ್ರಕ್ಕೊಂದು ಆಯೋಗ ಪುರಾಣಗಳಲ್ಲಿ ಆಧುನಿಕ ನ್ಯಾಯಾಲಯವಾಗಿದ್ದು, ಅದರ ಕುರಿತ ವಿಸ್ತಾರವಾದ ಅಧ್ಯಯನ ಅಗತ್ಯ ಎಂದು ಡಾ. ಗಿರೀಶ್ ಭಟ್ಟ ಅಭಿಪ್ರಾಯಪಟ್ಟರು.ದೇರಾಜೆಯವರಿಗೆ ತಾಳಮದ್ದಳೆ ಕಲೆ ಮುಂದಿನ ತಲೆಮಾರಿಗೆ ದಾಟಲು ಅಕ್ಷರರೂಪಕ್ಕೆ ತರುವ ಪ್ರಯತ್ನಗಳು ಪುಸ್ತಕಗಳ ಮೂಲಕ ಆಗಿದೆ ಕಲೆಯ ರಸಾತ್ಮಕತೆ ಬೆಳೆಸಲು ದೇರಾಜೆ, ಸಂಘಟನೆ ಹಾಗೂ ಕಲೆಯಲ್ಲಿನ ಶ್ರೇಷ್ಟ ಅಂಶ ಉಳಿಸುವ ಕಾರ್ಯವನ್ನು ಏರ್ಯ ಮಾಡಿದ್ದರು. ಪರಂಪರೆಯನ್ನು ಮುಂದುವರಿಸುವ ಕಾರ್ಯವನ್ನು ಇಬ್ಬರೂ ಮಾಡಿದ್ದಾರೆ ಎಂದರು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ ಪ್ರೊ.ತುಕಾರಾಮ ಪೂಜಾರಿ ಮಾತನಾಡಿ, ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರಕ್ಕೆ ಏರ್ಯರ ಕೊಡುಗೆ ಅಪಾರ ಎಂದರು.

ಕೆನರಾ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಶಂಕರ ಶೆಟ್ಟಿ ಗುಂಡಿಲಗುತ್ತು ಮಾತನಾಡಿ, ಏರ್ಯರ ಅಧ್ಯಯನ ಪ್ರವೃತ್ತಿ ಹಾಗೂ ದೇರಾಜೆಯವರ ಅರ್ಥಗಾರಿಕೆಗೆ ಸಾಟಿ ಇಲ್ಲ ಎಂದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಮಣಿ ರಾಮಕುಂಜ ದೇರಾಜೆ ಅವರ ಅರ್ಥಗಾರಿಕೆ ಕುರಿತು ಹಾಗೂ ಏರ್ಯರ ಒಡನಾಟದ ಕುರಿತು ತನ್ನ ಅನುಭವ ಹೇಳಿಕೊಂಡರು. ಎಸ್.ವಿ.ಎಸ್.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಅನಂತಪದ್ಮನಾಭ ರಾವ್ ಅವರು ಏರ್ಯ ಅವರು ಸಾಹಿತ್ಯಕ್ಕೆ ನೀಡಿದ ಪ್ರೋತ್ಸಾಹ ಸ್ಮರಿಸಿದರು. ಕಸಾಪದ ಬಂಟ್ವಾಳ ಪೂರ್ವಾಧ್ಯಕ್ಷರಾದ ನಿವೃತ್ತ ತಹಸೀಲ್ದಾರ್ ಕೆ.ಮೋಹನ ರಾವ್, ನಿವೃತ್ತ ಅಧ್ಯಾಪಕ ಜಯಾನಂದ ಪೆರಾಜೆ ಇಬ್ಬರ ನೆನಪುಗಳನ್ನು ಮಾಡಿದರು. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಅಳಿಯ ಏರ್ಯಬೀಡು ಬಾಲಕೃಷ್ಣ ಹೆಗ್ಡೆ ಮಾತನಾಡಿ ಆಳ್ವರ ವಿಸ್ತಾರವಾದ ಅಧ್ಯಯನ ಹಾಗೂ ಜೀವನದ ನೆನಪುಗಳನ್ನು ಮೆಲುಕು ಹಾಕಿದರು.ದೇರಾಜೆ ಸೀತಾರಾಮಯ್ಯ ಸಂಸ್ಮರಣಾ ಸಮಿತಿ ಗೌರವಾಧ್ಯಕ್ಷ ಆನೆಕಾರು ಗಣಪಯ್ಯ ಮಾತನಾಡಿ, ಏರ್ಯ ಲಕ್ಷ್ಮೀನಾರಾಯಣ ಆಳ್ವ ಮತ್ತು ದೇರಾಜೆ ಅವರ ಸಂಬಂಧಗಳನ್ನು ನೆನಪಿಸಿದರು.

ದೇರಾಜೆ ಸೀತಾರಾಮಯ್ಯ ಸಂಸ್ಮರಣಾ ಸಮಿತಿ ಅಧ್ಯಕ್ಷ ಪ್ರೊ.ಜಿ.ಕೆ.ಭಟ್ ಸೇರಾಜೆ ಮಾತನಾಡಿ, ದೇರಾಜೆ ಸೀತಾರಾಮಯ್ಯ ಮತ್ತು ಏರ್ಯ ಲಕ್ಷ್ಮೀನಾರಾಯಣ ಆಳ್ವರು ಮಿತ್ತನಡ್ಕದಲ್ಲಿ ನಡೆದ ಮಾಂಬಾಡಿ ಭಾಗವತರ ಅಭಿನಂದನಾ ಕಾರ್ಯಕ್ರಮದಲ್ಲಿ ಜತೆಜತೆಯಾಗಿ ದುಡಿದದ್ದನ್ನು ಸ್ಮರಿಸಿದರು. ಸಮಿತಿ ಸದಸ್ಯರಾದ ಮೂರ್ತಿ ದೇರಾಜೆ, ಭಾರವಿ ದೇರಾಜೆ, ಪ್ರೊ.ಶಂಕರ್, ಪ್ರಮುಖರಾದ ಕೃಷ್ಣಕುಮಾರ್ ಪೂಂಜ, ಕಜೆ ರಾಮಚಂದ್ರ ಭಟ್, ಮಹಾಬಲೇಶ್ವರ ಹೆಬ್ಬಾರ, ರಾಧೇಶ ತೋಳ್ಪಾಡಿ, ದಾಮೋದರ ರಾಮಕುಂಜ, ಮೊಹನ ಶೆಣೈ ಪಾಣೆಮಂಗಳೂರು, ಲೋಕನಾಥ ಶೆಟ್ಟಿ, ಹರೀಶ್ ಮಾಂಬಾಡಿ, ದಾಮೋದರ ಏರ್ಯ, ವಿಜಯ್ ಉಪಸ್ಥಿತರಿದ್ದರು. ದೇರಾಜೆ ಸಂಸ್ಮರಣಾ ಸಮಿತಿ ಕಾರ್ಯದರ್ಶಿ ಕೆ. ಶ್ರೀಕರ ಭಟ್ ಮರಾಠೆ ಪ್ರಾಸ್ತಾವಿಕ ಮಾತನಾಡಿದರು. ಮೈಥಿಲಿ ಪ್ರಾರ್ಥಿಸಿದರು. ದೇರಾಜೆ ಸಂಸ್ಮರಣಾ ಸಮಿತಿ ಅಧ್ಯಕ್ಷ ಪ್ರೊ.ಜಿ.ಕೆ.ಭಟ್ ಸೇರಾಜೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

 

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts