ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ನಡೆದ ಅಪಘಾತದಲ್ಲಿ ಪುತ್ತೂರಿನ ಮಾಜಿ ಸೈನಿಕ ಚಿದಾನಂದ ಕಾಮತ್ ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ ಕಾರೊಂದು ಸ್ಕೂಟರ್ ಗೆ ತಾಗಿ ಸವಾರ ರಸ್ತೆಗೆ ಬಿದ್ದು ಈ ಅಪಘಾತ ಸಂಭವಿಸಿದೆ. ಆಕ್ಟಿವಾದಲ್ಲಿ ಸಂಚರಿಸುತ್ತಿದ್ದ ಪುತ್ತೂರಿನ ಚಿದಾನಂದ ಕಾಮತ್ (55) ಸಾವನ್ನಪ್ಪಿದವರು.
ಮಂಚಿ ಸಮೀಪದ ಮೋಂತಿಮಾರ್ ಕಾಯರಪಡ್ಪು ಎಂಬಲ್ಲಿ ಘಟನೆ ನಡೆದಿದ್ದು, ಸಾಲೆತ್ತೂರುವಿನಿಂದ ಮುಡಿಪು ಕಡೆಗೆ ಹೋಗುತ್ತಿದ್ದ ಸ್ಕೂಟರ್ ಸವಾರ ಚಿದಾನಂದ ಕಾಮತ್ ಅವರಿಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರನನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.