ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.
ನ್ಯಾಯವಾದಿ ಮತ್ತು ನೋಟರಿ ಹಾಗೂ ವಕೀಲರ ಸಂಘ ಬಂಟ್ವಾಳದ ಮಾಜಿ ಅಧ್ಯಕ್ಷ ಎಂ.ಅಶ್ವನಿ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಚರಿತ್ರೆಯ ಕುರಿತ ಅರಿವು ನಮಗಿರಬೇಕು, ಬಿ.ವಿ.ಕಾರಂತರ ನೆನಪನ್ನು ಹುಟ್ಟೂರಿನವರು ನೆನಪಿಸಿಕೊಳ್ಳುತ್ತಿರುವುದು ಶ್ಲಾಘನೀಯ, ನಾಟಕೋತ್ಸವ ಏರ್ಪಡಿಸುವ ಮೂಲಕ ಅವರ ಕೆಲಸಕಾರ್ಯಗಳನ್ನು ನೆನಪಿಸುವ ಕಾರ್ಯ ನಡೆಯುತ್ತಿದೆ ಎಂದರು.
ಶಿವಮೊಗ್ಗದ ಕಮಲಾ ನೆಹರೂ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ನಾಗಭೂಷಣ ಎಚ್.ಎಸ್. ಮಾತನಾಡಿ, ಮಕ್ಕಳನ್ನು ರಂಗಚಟುವಟಿಕೆಗಳಿಂದ ವಿಮುಖರನ್ನಾಗಿ ಇಂದು ಯಾಂತ್ರಿಕವಾಗಿ ಟ್ಯೂಷನ್ ಗಳಿಗೆ ಕಳುಹಿಸಲಾಗುತ್ತದೆ, ಆದರೆ ನಾಟಕಾಭ್ಯಾಸ ಮಾಡಿದ ಮಕ್ಕಳು ಏಕಾಗ್ರತೆಯನ್ನು ಸಾಧಿಸುತ್ತಾರೆ, ಕುಶಾಗ್ರಮತಿಗಳಾಗುತ್ತಾರೆ. ಬಿ.ವಿ.ಕಾರಂತರು ವಿಶ್ವಕ್ಕೆ ಅಚ್ಚರಿ ಉಂಟುಮಾಡಿದ ಕಲಾವಿದರು. ರಂಗಸಂಗೀತದಲ್ಲಿ ಕಾರಂತರು ಕ್ರಾಂತಿ ಮಾಡಿದ್ದು, ಸಿದ್ಧ ಸೂತ್ರಗಳಿಂದ ಭಿನ್ನವಾಗಿ ತನ್ನದೇ ಆದ ಶೈಲಿಯನ್ನು ರೂಪಿಸಿದರು ಎಂದರು.
ಟ್ರಸ್ಟ್ ಕಾರ್ಯಚಟುವಟಿಕೆಗಳ ಹಾಗೂ ನಾಟಕೋತ್ಸವ ಕುರಿತು ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಶುಭ ಹಾರೈಸಿದರು.
ಟ್ರಸ್ಟ್ ಉಪಾಧ್ಯಕ್ಷ ಕೆ.ಗಣೇಶ ಐತಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಬಾಲಕೃಷ್ಣ ಶೆಟ್ಟಿ ವಂದಿಸಿದರು. ಜತೆ ಕಾರ್ಯದರ್ಶಿಗಳಾದ ರಮಾನಂದ ನೂಜಿಪ್ಪಾಡಿ ಹಾಗೂ ಮೇರಾವು ಉಮಾನಾಥ ರೈ ಕಾರ್ಯಕ್ರಮ ನಿರ್ವಹಿಸಿದರು.
ಶುಕ್ರವಾರ ಆರಂಭಗೊಂಡ ನಾಟಕ ಭಾನುವಾರ ಸಮಾಪನಗೊಂಡಿತು. ಮೊದಲ ದಿನ ನಟಮಿತ್ರರು ತೀರ್ಥಹಳ್ಳಿ ಅವರಿಂದ ಸಂಸಾರದಲ್ಲಿ ಸನಿದಪ ಎಂಬ ಕನ್ನಡ ನಾಟಕ ಪ್ರದರ್ಶನಗೊಂಡಿತು. ದಾರಿಯೋ ಪೋ ಮೂಲರೂಪದ ನಾಟಕವನ್ನು ಕೆ.ವಿ.ಅಕ್ಷರ ಮರುರೂಪಕ್ಕಿಳಿಸಿದ್ದು, ಶಿವಕುಮಾರ ತೀರ್ಥಹಳ್ಳಿ ಬೆಳಕು ಮತ್ತು ನಿರ್ದೇಶನ ಹಾಗೂ ಶ್ರೀಪಾದ ತೀರ್ಥಹಳ್ಳಿ ಸಂಗೀತ ನೀಡಿದ್ದಾರೆ. ಎರಡನೇ ದಿನ ಅಭಿನಯ ಶಿವಮೊಗ್ಗ ಅವರಿಂದ ಪೀಠಾರೋಹಣ ನಾಟಕ ಪ್ರಸ್ತುತಗೊಂಡಿತು. ಪ್ರೊ.ಎಸ್.ಸಿ.ಗೌರೀಶಂಕರ ರಚನೆ ಮತ್ತು ನಿರ್ದೇಶನದ ನಾಟಕಕ್ಕೆ ರಾಘವೇಂದ್ರ ಪ್ರಭು, ಶ್ರೀಪಾದ ತೀರ್ಥಹಳ್ಳಿ ಸಂಗೀತವಿತ್ತು. ಶಂಕರ್ ಬೆಳಕಿನ ವಿನ್ಯಾಸ ನೀಡಿದರು. ಭಾನುವಾರ ರಾತ್ರಿ ನಿಕೊಲಯ್ ಗೊಗೋಲ್ ಮೂಲದ ಪ್ರೊ.ಎಸ್.ಸಿ.ಗೌರಿಶಂಕರ ರೂಪಾಂತರದ ಹಾಗೂ ನಿರ್ದೇಶನದ ನಮ್ಮ ಹಳ್ಳಿ ಥಿಯೇಟರ್ ಶಿವಮೊಗ್ಗ ಪ್ರಸ್ತುತಿಯ ಮಹಾಬಲಯ್ಯನ ಕೋಟು ನಾಟಕ ಪ್ರದರ್ಶನಗೊಂಡಿತು. ಬೆಳಕು ಬೆಳಲಕಟ್ಟೆ ಶಂಕರ, ಸಂಗೀತ ಶ್ರೀಪಾದ ತೀರ್ಥಹಳ್ಳಿ, ಶಿವಕುಮಾರ ತೀರ್ಥಹಳ್ಳಿ, ವಿನ್ಯಾಸ ಮಂಜುನಾಥ ಸ್ವಾಮಿ, ರಂಗಸಜ್ಜಿಕೆ ನಾಗಶಯನ ಹಾಗೂ ರಂಗನಿರ್ವಹಣೆ ಪ್ರತೀಕ್ ಸಿ.ಎಂ. ನಾಟಕಕ್ಕಿತ್ತು.