ಮಂಚಿಯ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕುಕ್ಕಾಜೆಯ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಬಿ.ವಿ.ಕಾರಂತ ನೆನೆಪಿನ ಮಂಚಿ ನಾಟಕೋತ್ಸವಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಪ್ರೊ. ಶಂಕರ್ ಚಾಲನೆ ನೀಡಿದರು.
ಬಳಿಕ ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಬಿ.ವಿ.ಕಾರಂತ, ಜಿ.ವಿ. ಅಯ್ಯರ್ ಅವರಂತಹ ಶ್ರೇಷ್ಠ ಸಾಧಕರೊಂದಿಗಿನ ಒಡನಾಟ ನನ್ನ ಬದುಕಿಗೆ ಧನ್ಯತೆ ನೀಡಿದೆ ಎಂದರು. ಮ್ಯಾಜಿಕ್ ಮತ್ತು ನಾಟಕ ಎರಡರ ನಡುವಿನ ಸಾಮ್ಯತೆ ಕುರಿತು ವಿವರಿಸಿದ ಅವರು, ನಾಟಕದಲ್ಲಿ ಮ್ಯಾಜಿಕ್ ಬೇಕು, ಮ್ಯಾಜಿಕ್ ನಲ್ಲೂ ನಾಟಕ ಬೇಕು ಎಂದರು.
ಶಿವಮೊಗ್ಗ ರಂಗಾಯಣದ ಮಾಜಿ ನಿರ್ದೇಶಕ ಸಂದೇಶ್ ಜವಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಂಚಿ ಎನ್ನುವ ಚಿಕ್ಕ ಹಳ್ಳಿಯಿಂದ ಬಂದ ವ್ಯಕ್ತಿ ಬಿ.ವಿ.ಕಾರಂತ, ಭಾರತೀಯ ರಂಗಭೂಮಿಗೆ ವಿಶ್ವಮಾನ್ಯತೆ ತಂದುಕೊಟ್ಟರು, ವಿಭಿನ್ನ, ವಿಶೇಷ ಪ್ರಯೋಗವನ್ನು ನಾಟಕಕ್ಕೆ ನೀಡಿದವರು ಎಂದರು. ರಂಗಭೂಮಿಗೆ ಸಂಬಂಧಪಟ್ಟ ಕೆಲಸ, ಅಧ್ಯಯನ, ಸಂಶೋಧನೆ, ವಿಚಾರ ಸಂಕಿರಣ ಕಾರಂತರ ಹುಟ್ಟೂರಲ್ಲಿ ಆಗಬೇಕಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಕ್ಯಾಂಪ್ಕೋ ನಿರ್ದೇಶಕ ಡಾ. ಜಯಪ್ರಕಾಶ್ ನಾರಾಯಣ ಟಿ.ಕೆ. ಮಾತನಾಡಿ ಸಿನಿಮಾಗಳಲ್ಲಿ ಹೊಸತನದ ಕಲ್ಪನೆಯನ್ನು ಪರಿಚಯಿಸಿದವರು ಬಿ.ವಿ.ಕಾರಂತರು ಎಂದರು. ನಾಟಕದಲ್ಲಿ ಹಾಸ್ಯವೇ ಪ್ರಧಾನವಾಗುತ್ತಿರುವ ಈ ಕಾಲಘಟ್ಟದಲ್ಲಿ ನವ್ಯ ನಾಟಕಗಳು ರುಚಿಸುತ್ತವೇಯೇ ಎನ್ನುವ ಸಂದಿಗ್ದತೆಯಲ್ಲಿ ರಂಗಭೂಮಿಕ ಟ್ರಸ್ಟ್ ಪ್ರತಿ ವರ್ಷ ರಂಗ ನಾಟಕವನ್ನು ನಡೆಸಿಕೊಂಡು ಬರುತ್ತಿರುವುದು ಅಭಿನಂದನೀಯ ಆ ಮೂಲಕ ಕಲೆ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸಿ ಕೊಂಡು ಬರುತ್ತಿದೆ ಎಂದರು.
ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಚ ಕಜೆ ರಾಮಚಂದ್ರ ಭಟ್ ಸ್ವಾಗತಿಸಿದರು. ಉಮಾನಾಥ ರೈ ಮೇರಾವು, ಹಾಗೂ ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಟ ಮಿತ್ರರು ತೀರ್ಥಹಳ್ಳಿ ಅವರಿಂದ ಸಂಸಾರದಲ್ಲಿ ಸನಿದಪ ನಾಟಕ ನಡೆಯಿತು.