ವಾಮದಪದವು ಸಮೀಪ ಚೆನ್ನೈತ್ತೋಡಿ ಗ್ರಾಮದ ತಿಮರಡ್ಡ ನಿವಾಸಿ ಹಾಗೂ ಕಾಂಗ್ರೆಸ್ ನ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರಾಗಿದ್ದ ಪದ್ಮನಾಭ ಸಾವಂತ್ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ನಿಯೋಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ಮಾಡಿದೆ.
ಸಾಮಾಜಿಕ ಹೋರಾಟಗಾರ ಹಾಗೂ ಆರ್ ಟಿ ಐ ಕಾರ್ಯಕರ್ತರೂ ಆಗಿದ್ದ ಸಾಮಂತ್ ಅವರ ಸಾವಿನ ಕುರಿತು ಸೂಕ್ತ ತನಿಖೆ ನಡೆಸಿ ಸಾವಿನ ಸತ್ಯಾಸತ್ಯತೆ ಹೊರಗೆಳೆಯಬೇಕೆಂದು ಆಗ್ರಹಿಸಿದೆ. ಕಳೆದ ಮಾರ್ಚ್ 31 ರಂದು ಪದ್ಮನಾಭ ಅವರ ಮೃತದೇಹ ಅವರ ಮನೆ ಬಳಿ ಗುಡ್ಡದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ಸಾವಿನಲ್ಲಿ ಸಂಶಯಗಳಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮುಖಂಡರ ನಿಯೋಗ ಏಪ್ರಿಲ್ 2 ರಂದು ಜಿಲ್ಲಾ ಎಸ್ಪಿ ರಿಷ್ಯಂತ್ ಸಿ ಬಿ ಅವರನ್ನು ಭೇಟಿ ಮಾಡಿತ್ತು. ಈ ಸಂದರ್ಭ ವಿಶೇಷ ತನಿಖಾ ತಂಡ ರಚಿಸಿ ಈ ಬಗ್ಗೆ ತನಿಖೆ ನಡೆಸುವ ಬಗ್ಗೆ ಎಸ್ಪಿ ನಾಯಕರಿಗೆ ಭರವಸೆ ನೀಡಿದ್ದರು. ಆದರೆ ಯಾವುದೇ ಬೆಳವಣಿಗೆ ಕಂಡು ಬಾರದ ಹಿನ್ನಲೆಯಲ್ಲಿ ಇದೀಗ ಮತ್ತೆ ರಮಾನಾಥ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಎಸ್ಪಿ ಭೇಟಿ ನೀಡಿ ತನಿಖೆಗೆ ಆಗ್ರಹಿಸಿತು.
ಆತ್ಮಹತ್ಯೆಯ ಸಂದರ್ಭಗಳೇನಾದರೂ ತನಿಖೆಯಲ್ಲಿ ಕಂಡು ಬಂದಲ್ಲಿ, ಇದಕ್ಕೆ ಪ್ರಚೋದನೆಗೈದು ಘಟನೆಗೆ ಕಾರಣರಾದ ವ್ಯಕ್ತಿಗಳನ್ನು ಬಂಧಿಸಿ ಅವರ ವಿರುದ್ದ ಕೂಡಲೇ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆಯೂ ಕಾಂಗ್ರೆಸ್ ನಿಯೋಗ ಜಿಲ್ಲಾ ಎಸ್ಪಿ ಅವರನ್ನು ಒತ್ತಾಯಿಸಿದೆ, ನಿಯೋಗದಲ್ಲಿ ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಎಂ ಎಸ್ ಮೊಹಮ್ಮದ್, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಬಿ ಎಂ ಅಬ್ಬಾಸ್ ಅಲಿ, ಕೆ ಮಾಯಿಲಪ್ಪ ಸಾಲ್ಯಾನ್, ಪ್ರಮುಖರಾದ ಬಿ ಪದ್ಮಶೇಖರ ಜೈನ್, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಜಗದೀಶ್ ಕೊಯಿಲ, ಬಿ ಆರ್ ಅಂಚನ್,ಸುರೇಶ್,ಆದಂ ಕುಂಞ, ದೇವಪ್ಪ ಕುಲಾಲ್ ಕರ್ಪೆ, ಸುಧಾಕರ್ ಶಣೈ ಬಡಕಜೆಕಾರು, ಸದಾನಂದ ಶೆಟ್ಟಿ, ಪ್ರವೀಣ್ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.