ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವಸಹಾಯ ಗುಂಪಿನ ಚಟುವಟಿಕೆಗಳನ್ನು ನಡೆಸಲು ಅಡ್ಡಿಪಡಿಸುತ್ತಿರುವ ಹಾಗೂ ಸದಸ್ಯರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಸಂಘದ ಸದಸ್ಯರು, ಪದಾಧಿಕಾರಿಗಳು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲುವಂತೆ ಆಗ್ರಹಿಸಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ,ಯೋಜನೆಯ ಬಂಟ್ವಾಳ ಪ್ರಗತಿಬಂಧು ಸ್ವಸಹಾಯ ಸಂಘಗಳು ಹಾಗೂ ಕೇಂದ್ರ ಒಕ್ಕೂಟದ ವತಿಯಿಂದ ಬಂಟ್ವಾಳ ಡಿ.ವೈ.ಎಸ್.ಪಿ.ಕಚೇರಿಗೆ ದೂರು ನೀಡಿ ಒತ್ತಾಯಿಸಲಾಯಿತು.
ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ರೊನಾಲ್ಡ್ ಡಿ’ಸೋಜ ಮಾತನಾಡಿ, ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧಿ ಯೋಜನೆ ಪ್ರಾಯೋಜಿತ ಸ್ವಸಹಾಯ ಸಂಘ ಕಳೆದ 20 ವರ್ಷಗಳಿಂದ ನಡೆಯುತ್ತಿದ್ದು, ತಾಲೂಕಿನಲ್ಲಿ 2755 ಸಂಖ್ಯೆಯ ಸಂಘಗಳಿದ್ದು, 22,841 ಮಂದಿ ಪಾಲುದಾರ ಸದಸ್ಯರಿದ್ದಾರೆ. ಇದಕ್ಕೆ ಪೂರಕವಾಗಿ 25 ರಿಂದ 30 ಸಂಘಗಳ ಪ್ರತಿನಿಧಿಗಳನ್ನೆಲ್ಲ ಸೇರಿಸಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟವನ್ನು ರಚಿಸಿದ್ದು, ತಾಲೂಕಿನಲ್ಲಿ ಒಟ್ಟು 71 ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ಈ ಒಕ್ಕೂಟಗಳ ಮುಖೇನ ಸದಸ್ಯರು ಶಿಸ್ತು ಬದ್ಧವಾದ ವ್ಯವಹಾರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಇತ್ತೀಚೆಗೆ ನಮ್ಮ ಸಂಘಗಳಲ್ಲಿ ಅಂತರಿಕವಾಗಿ ನಡೆಯುವ ವ್ಯವಹಾರ/ ಚಟುವಟಿಕೆಗಳ ಬಗ್ಗೆ ಸದಸ್ಯರಿಗೆ ಸುಳ್ಳು ಮಾಹಿತಿಗಳನ್ನು ನೀಡುತ್ತಾ ವ್ಯವಹಾರಗಳ ಬಗ್ಗೆ ತಪ್ಪು ಕಲ್ಪನೆಗಳನ್ನು ಮೂಡಿಸಿ, ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳನ್ನು, ದ್ವೇಷದ ಭಾವನೆಗಳನ್ನು ಹುಟ್ಟುಹಾಕಿ, ಸಂಘಗಳ ಸ್ವಾಸ್ಥ್ಯವನ್ನು ಕಡೆಸಿ, ಸಮಾಜದಲ್ಲಿ ಶಾಂತಿ ಭಂಗವಾಗುವಂತಹ ಸನ್ನಿವೇಶಗಳಿಗೆ ಪ್ರೇರಣೆ ನೀಡುವ ಕೃತ್ಯಗಳು ನಡೆಯುತ್ತಿದ್ದು, ಇವರು ನಮ್ಮ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಮನೆ ಭೇಟಿ ಮಾಡುವಾಗ ಗೊತ್ತಿಲ್ಲದಂತೆ ವಿಡಿಯೋ ಮಾಡಿಸಿ ನಮ್ಮ ಅನುಮತಿ ಇಲ್ಲದೆ ಯೂಟ್ಯೂಬ್ ನಲ್ಲಿ ಹರಿದು ಬೀಡುತ್ತಿದ್ದಾರೆ. ಇದರಿಂದಾಗಿ ನಮ್ಮ ಸಂಘದ ಮಹಿಳೆಯರಿಗೆ ತುಂಬಾ ಅಘಾತವಾಗಿರುತ್ತದೆ. ಅಲ್ಲದೆ ಸರಕಾರ ಸ್ವಾಮ್ಯದ ಬ್ಯಾಂಕ್ ನಲ್ಲಿ ಸದಸ್ಯರು ಪಡೆದುಕೊಂಡ ಸಾಲಗಳ ಕಂತನ್ನು ಕಟ್ಟದಂತೆ ಪ್ರೇರಣೆ ನೀಡುತ್ತಿದ್ದು, ಹಾಗೂ ಸದಸ್ಯರಿಗೆ ತಾಕೀತು ಮಾಡಿ ಶಿಸ್ತುಬದ್ಧವಾಗಿ ನಡೆಸುತ್ತಿರುವ ಸಂಘಗಳ ಚಟುವಟಿಕೆಗಳನ್ನು ಕೆಡಿಸುತ್ತಾ ಸಮಾಜದಲ್ಲಿ ಶಾಂತಿ ಕದಡುವ ಕೃತ್ಯವನ್ನು ಎಸಗುತ್ತಿರುವುದು ವಿಷಾದನೀಯ. ಆದ್ದರಿಂದ ಇವರ ಮೇಲೆ ಕಾನೂನು ನಿಯಮದಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಈ ಸಂದರ್ಭ ಒಕ್ಕೂಟದ ಪ್ರಮುಖರಾದ ಸದಾನಂದ ನಾವೂರ, ಶೇಖರ ಸಾಮಾನಿ, ರಾಜೇಶ್ ಪಂಜಿಕಲ್ಲು, ಮಹಮ್ಮದ್ ಶರೀಫ್, ಸರಸ್ವತಿ ಆಳ್ವ, ವಸಂತಿ ಗಂಗಾಧರ, ವಿಜಯ ನಾವೂರ, ಮನೋಹರ ನೆರಂಬೋಳು, ಸದಾನಂದ ಶೀತಲ್, ವಸಂತ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.