ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಬಿ.ಸಿ.ರೋಡ್ ಸೇತುವೆಯ ಕೆಲಸ ಮುಕ್ತಾಯವಾದಂತೆ ಕಂಡರೂ ಇನ್ನೂ ಜೋಡಣೆ ರಸ್ತೆಗಳ ಕೆಲಸ ಬಾಕಿ ಇದೆ. ಇನ್ನು ಮೆಲ್ಕಾರ್, ಮಾಣಿಯ ಅಂಡರ್ ಪಾಸ್ ಗಳೂ ಅಂತಿಮ ಹಂತದಲ್ಲಿದ್ದು, ಸುರಕ್ಷತಾ ಕ್ರಮಗಳನ್ನು ಮಾಡಿದ ನಂತರ ಸಾರ್ವಜನಿಕರ ಸಂಚಾರಕ್ಕೆ ತೆರೆದುಕೊಳ್ಳಬಹುದು.
ಬಿ.ಸಿ.ರೋಡ್ ಅಡ್ಡಹೊಳೆ ಅಭಿವೃದ್ಧಿಯ ಬಿ.ಸಿ.ರೋಡ್ ಆರಂಭದ ಭಾಗವಾಗಿ ನೇತ್ರಾವತಿ ನದಿಗೆ ಕಟ್ಟಲಾದ ಸೇತುವೆ ಕಾಮಗಾರಿ ಪೂರ್ಣಗೊಂಡರೂ ರಸ್ತೆ ಸಂಚಾರ ವ್ಯವಸ್ಥೆಯ ನಿರ್ಮಾಣ ಕಾಮಗಾರಿ ಪೂರ್ಣವಾಗದ ಕಾರಣ, ಸದ್ಯಕ್ಕಂತೂ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಈಗಾಗಲೇ ಬಿ.ಸಿ.ರೋಡ್ ನ ಜಂಕ್ಷನ್ ನಲ್ಲಿ ಅಲ್ಲಲ್ಲಿ ಕಾಮಗಾರಿ ನಡೆಯುವ ಕಾರಣ ಎಲ್ಲಿ ಡೈವರ್ಶನ್ ತೆಗೆದುಕೊಳ್ಳಬೇಕು ಎಂದು ಸವಾರರು ಗಲಿಬಿಲಿಗೊಳ್ಳುತ್ತಿದ್ದು ಅಪಘಾತಗಳೂ ನಡೆದಿವೆ. ಆದರೆ ಸೇತುವೆ ಕಾಮಗಾರಿಯ ಸಂಪರ್ಕ ರಸ್ತೆ ಇನ್ನೂ ಆಗದ ಕಾರಣ ಇನ್ನೂ ಗೊಂದಲ ಮುಂದುವರಿಯಲಿದೆ.
ಪಾಣೆಮಂಗಳೂರು ಅಂಡರ್ ಪಾಸ್ ನ ಮೇಲ್ಸೇತುವೆಯಲ್ಲಿ ಶನಿವಾರ ಬೆಳಗ್ಗೆ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ತೆರವು ಮಾಡಲಾಯಿತು. ಬಳಿಕ ಮಧ್ಯಾಹ್ನದ ಹೊತ್ತಿಗೆ ಎಂದಿನಂತೆಯೇ ಸರ್ವೀಸ್ ರಸ್ತೆಯಲ್ಲಿ ವಾಹನಗಳು ತೆರಳಿದವು.
ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ಮಾರ್ಗದಲ್ಲಿ ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ ರಸ್ತೆ ಅಭಿವೃದ್ಧಿಯ ಭಾಗವಾಗಿ ಪಾಣೆಮಂಗಳೂರು, ಮೆಲ್ಕಾರ್ ಹಾಗೂ ಮಾಣಿ, ಬುಡೋಳಿ, ಸತ್ತಿಕಲ್ಲು, ಉಪ್ಪಿನಂಗಡಿಯಲ್ಲಿ ಅಂಡರ್ ಪಾಸ್ ಆಗುತ್ತಿದ್ದು, ಕಲ್ಲಡ್ಕದಲ್ಲಿ ಬೃಹತ್ ಫ್ಲೈಓವರ್ ನಿರ್ಮಾಣವಾಗುತ್ತಿದೆ. ಅಲ್ಲದೆ ಬಿ.ಸಿ.ರೋಡ್ ನಲ್ಲಿ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಪಾಣೆಮಂಗಳೂರಿನಲ್ಲಿ ಸರ್ವೀಸ್ ರಸ್ತೆಯ ಮೂಲಕ ವಾಹನಗಳು ಸಾಗುತ್ತಿದ್ದು, ಶನಿವಾರ ಬೆಳಗ್ಗೆ ನೂತನವಾಗಿ ನಿರ್ಮಾಣವಾಗುತ್ತಿರುವ ಪಾಣೆಮಂಗಳೂರು ಅಂಡರ್ ಪಾಸ್ ನ ಮೇಲ್ಸೇತುವೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಅಪಾಯಕಾರಿಯಾಧ ಸನ್ನಿವೇಶದಲ್ಲಿ ವಾಹನ ಸಂಚಾರಕ್ಕೆ ಇದು ಯೋಗ್ಯವಲ್ಲ, ಇನ್ನೂ ಹಲವಾರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗಿರುವುದರಿಂದ ಈ ಅಂಡರ್ ಪಾಸ್ ನ ಮೇಲ್ಸೇತುವೆಯಲ್ಲಿ ವಾಹನ ಸಂಚಾರವನ್ನು ಮಧ್ಯಾಹ್ನದ ಬಳಿಕ ಬಂದ್ ಮಾಡಲಾಯಿತು. ಇದೀಗ ಎಂದಿನಂತೆ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ.