ಶಾಲಾರಂಭಕ್ಕೆ ಕೆಲವೇ ದಿನ ಉಳಿದಿದೆ. ಆದರೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಿಂದ ವಿಟ್ಲಕ್ಕೆ ತೆರಳುವ ರಸ್ತೆಯ ಬದಿಯಲ್ಲೇ ಇರುವ ಗೋಳ್ತಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಳಾದ ಕಟ್ಟಡ ಇನ್ನೂ ತೆರವೇ ಆಗಿಲ್ಲ.
ಇಲ್ಲಿ ಇಬ್ಬರು ಶಿಕ್ಷಕರು ಇದ್ದಾರೆ. ಸರಕಾರ ನೇಮಿಸಿದ ಅತಿಥಿ ಶಿಕ್ಷಕರೂ ಸೇರಿ ಒಟ್ಟು ಮೂವರು ಪಾಠ ಮಾಡಲು ಬರುತ್ತಾರೆ. ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಒಟ್ಟು 36 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಕಲಿಕೆಯ ವಿಷಯಕ್ಕೆ ಬಂದರೆ ಈ ಮಕ್ಕಳು ಅತ್ಯಂತ ಪ್ರತಿಭಾಶಾಲಿಗಳು. ಆದರೆ ಶಾಲೆಯಲ್ಲಿ ಹೆದರಿಕೊಂಡೇ ಪಾಠ ಕೇಳಬೇಕಾದ ಪರಿಸ್ಥಿತಿ.
1967ನೇ ಇಸವಿಯಲ್ಲಿ ನಿರ್ಮಾಣವಾದ ಶಾಲೆಯ ಎರಡು ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ಹಂಚಿನ ತುಂಡುಗಳು ಪ್ರತಿದಿನವೂ ಬೀಳುತ್ತಿವೆ. ಇನ್ನು ಒಂದರಿಂದ ಏಳನೇ ತರಗತಿವರೆಗಿನ ಶಾಲೆಯ ಈಗಿನ ಕಟ್ಟಡವೂ ಮರುವಿನ್ಯಾಸಗೊಳಿಸಿ ಹೊಸ ಸ್ವರೂಪಕ್ಕೆ ಬರಬೇಕಾದ ಅಗತ್ಯವಿದೆ.
ಶಾಲೆಯ ಟ್ಯಾಂಕಿಯೂ ಶಿಥಲವಾಗಿದ್ದು ಕುಸಿದು ಬೀಳುವ ಹಂತದಲ್ಲಿದೆ. ಇಂಥ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಎಲ್.ಕೆ.ಜಿ, ಯು.ಕೆ.ಜಿಯನ್ನು ಸ್ಥಳೀಯ ಎಸ್.ಡಿ.ಎಂ.ಸಿಯವರು ನಡೆಸಿದ್ದರು. ಆದರೆ ಆರ್ಥಿಕ ಸಂಕಷ್ಟದಿಂದ ಬಂದ್ ಮಾಡಬೇಕಾಯಿತು. ಎಲ್ಲಕ್ಕಿಂತ ಪ್ರಧಾನವಾಗಿ ಶಾಲಾ ಮಕ್ಕಳ ಶೌಚಾಲಯದ ಅತಿಸನಿಹವೇ ಇರುವ ಎರಡು ಕೊಠಡಿಗಳು ಮಕಾಡೆ ಮಲಗುವ ಎಲ್ಲ ಲಕ್ಷಣಗಳಿದ್ದು, ಇದರ ಆಸುಪಾಸಿನಲ್ಲಿ ಮಕ್ಕಳೇನಾದರೂ ಹೋದರೆ, ಅವರಿಗೂ ಅಪಾಯ ತಪ್ಪಿದ್ದಲ್ಲ.
ವಿವೇಕ ಕೊಠಡಿ ಇದೆ: ವಿವೇಕ ಕೊಠಡಿಗಳ ನಿರ್ಮಾಣದ ಯೋಜನೆಯಲ್ಲಿ ಒಂದು ಕೊಠಡಿ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಮುಹೂರ್ತ ಕೂಡಿಬಂದಿಲ್ಲ.
ಶಾಲೆಗೆ ಇನೋಸಿಸ್ ಐದು ಕಂಪ್ಯೂಟರ್ ಗಳನ್ನು ದಾನವಾಗಿ ನೀಡಿದೆ. ಸರಕಾರ ಸರಿಯಾದ ಪೋಷಣೆ ನೀಡಿದರೆ ಶಾಲೆ ಸಶಕ್ತವಾಗಿ ಬೆಳೆಯಬಹುದು. ಶಾಲಾಭಿವೃದ್ಧಿಗೆಂದು ಸರಕಾರದಿಂದ ಸೌಲಭ್ಯಗಳು ದೊರಕುವುದೇ ವಿರಳ. ಬರುವ ಸೌಲಭ್ಯಗಳು ಸದ್ಬಳಕೆ ಆಗಬೇಕು, ಬರುವ ಪ್ರತಿಯೊಂದು ಅನುದಾನವೂ ಸದ್ವಿನಿಯೋಗ ಆಗಬೇಕು ಎನ್ನುತ್ತಾರೆ ಎಸ್. ಡಿ.ಎಂ.ಸಿ ಅಧ್ಯಕ್ಷ ವೆಂಕಪ್ಪ ಜಿ.