ಖೋಟಾ ನೋಟು ವಿನಿಮಯ ನಡೆಸುವ ಜಾಲವೊಂದನ್ನು ಬಂಟ್ವಾಳ ನಗರ ಪೊಲೀಸರು ಪತ್ತೆಹಚ್ಚಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಮೊಹಮ್ಮದ್ ಸಿ.ಎ (61) ಮತ್ತು ಕಮರುನ್ನೀಸಾ (41) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಶೆರೀಫ್ ಗೆ ಹುಡುಕಾಟ ನಡೆಯುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇವರಿಂದ 500 ರೂ ಮುಖಬೆಲೆಯ 46 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಪ್ರಕಾರ, ಘಟನೆ ವಿವರ ಹೀಗಿದೆ: ಮೇ.10ರಂದು ರಾತ್ರಿ ಬಂಟ್ವಾಳ ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕೇರಳ ರಿಜಿಸ್ಟ್ರೇಶನ್ ಕಾರನ್ನು ಬಂಟ್ವಾಳ ನಗರ ಠಾಣೆ ಎಸ್ಸೈ ರಾಮಕೃಷ್ಣ ಪರಿಶೀಲಿಸಿದಾಗ, ಕಾರಿನ ಚಾಲಕ ಸೀಟಿನಲ್ಲಿದ್ದಾತ ಹಾಗೂ ಇನ್ನೋರ್ವ ವ್ಯಕ್ತಿ ಪರಾರಿಯಾಗಲು ಯತ್ನಿಸಿರುತ್ತಾರೆ. ಕಾರಿನಲ್ಲಿ ಓರ್ವ ಮಹಿಳೆ ಪತ್ತೆಯಾಗಿರುತ್ತಾಳೆ. ಪರಾರಿಯಾಗುತ್ತಿದ್ದವರ ಪೈಕಿ, ಓರ್ವನನ್ನು ಸೆರೆಹಿಡಿಯಲಾಗಿದೆ, ಮತ್ತೋರ್ವ ನಾಪತ್ತೆಯಾಗುತ್ತಾನೆ. ಸೆರೆಸಿಕ್ಕವರನ್ನು ವಿಚಾರಿಸಲಾಗಿ ಆತನು ಕಾಸರಗೋಡಿನ ಕೂಡ್ಲು ಗ್ರಾಮದ ಮೊಹಮ್ಮದ್ ಸಿ.ಎ. (61), ಕಾರಿನಲ್ಲಿದ್ದ ಮಹಿಳೆ ಕಾಸರಗೋಡು ಕೂಡ್ಲು ಗ್ರಾಮದ ಕಮರುನ್ನೀಸಾ (41) ಎಂದು ತಿಳಿದುಬಂದಿದೆ. ಓಡಿ ಪರಾರಿಯಾದ ವ್ಯಕ್ತಿ ಶೆರೀಫ್ ಎಂಬುದಾಗಿ ತಿಳಿದುಬಂದಿರುತ್ತದೆ.
ವಿಚಾರಣೆಯ ವೇಳೆ ಆರೋಪಿಗಳು ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿರುವುದಾಗಿ ತಿಳಿಸಿದ್ದು, ತಮ್ಮ ಸ್ವಾಧೀನದಲ್ಲಿದ್ದ 500 ರೂಪಾಯಿ ಮುಖ ಬೆಲೆಯ 46 ಖೋಟಾ ನೋಟುಗಳನ್ನು ಹಾಜರುಪಡಿಸಿರುತ್ತಾರೆ. ನೋಟುಗಳನ್ನು ವಶಕ್ಕೆ ಪಡೆದಿದ್ದು, ಬಳಿಕ ಆರೋಪಿಗಳನ್ನು ಹಾಗೂ ಅವರ ಬಳಿಯಿದ್ದ ರೂ 5,300 ನಗದು ಹಣ ಮತ್ತು 3 ಮೊಬೈಲ್ ಗಳನ್ನು ಸ್ವಾಧೀನಪಡಿಸಿ, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.