ಒಂದೆಡೆ ಉರಿಸೆಖೆ, ಮತ್ತೊಂದೆಡೆ ಯಾವ ಬಟ್ಟೆ ಧರಿಸಿದರೂ ಸುರಿಯುವ ಬೆವರು, ಈ ಸವಾಲಿನ ಮಧ್ಯೆ ಹೀಟ್ ವೇವ್. ಇಂಥ ಸನ್ನಿವೇಶದಲ್ಲಿಯೂ ತಮ್ಮ ಪಾತ್ರವನ್ನು ನಿರ್ವಹಿಸುವ ನಾಟಕ, ಯಕ್ಷಗಾನ, ನೃತ್ಯ ಕಲಾವಿದರ ಶ್ರದ್ಧೆ ಅನನ್ಯ. ಇಂಥ ಹೊತ್ತಿನಲ್ಲೇ ಮೇ.1ರ ರಾತ್ರಿ ಯಕ್ಷಗಾನ ರಂಗಸ್ಥಳದಲ್ಲಿ ತನ್ನ ಪಾತ್ರ ನಿರ್ವಹಿಸಿ, ವೇಷ ಕಳಚಿ, ಇನ್ನೇನು ಬಣ್ಣ ತೆಗೆಯಬೇಕು ಎಂಬ ಹೊತ್ತಿನಲ್ಲಿ ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಗಂಗಾಧರ ಪುತ್ತೂರು ಅಸು ನೀಗಿದ್ದಾರೆ. ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದು, ಅಸಂಖ್ಯ ಅಭಿಮಾನಿಗಳನ್ನು ಅಗಲಿದ್ದಾರೆ.
ಕೋಟ ಗಾಂಧಿ ಮೈದಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿದ್ದ ಹಾಗೆ, ರಾತ್ರಿ ಸುಮಾರು 12.25ಕ್ಕೆ ಚೌಕಿಯಲ್ಲಿ ಮಂಗಳ ಆಗುವ ವೇಳೆಗೇ ತೀವ್ರ ಹೃದಯಾಘಾತದಿಂದ ನಿಧನರಾದರು.
ಯಕ್ಷಗಾನ ಕಲಾವಿದರಲ್ಲಿ ಅನಿವಾರ್ಯವಿದ್ದರೆ, ಎಷ್ಟು ಪಾತ್ರಗಳನ್ನು ಯಾವ ಹೊತ್ತಿಗೂ ಲೀಲಾಜಾಲವಾಗಿ ನಿರ್ವಹಿಸಬಲ್ಲ ಕಲಾವಿದರು ವಿರಳ. ಅಂಥ ಕಲಾವಿದರ ಪೈಕಿ ಗಂಗಾಧರ ಜೋಗಿ ಪುತ್ತೂರು ಗಮನ ಸೆಳೆಯುತ್ತಾರೆ. ಸಣ್ಣ, ದೊಡ್ಡದಿರಲಿ ಯಾವ ಪಾತ್ರವನ್ನೂ ನಿರ್ವಹಿಸುವ ಸವ್ಯಸಾಚಿ ಕಲಾವಿದರಾದ ಗಂಗಾಧರ್, ಧರ್ಮಸ್ಥಳ ಮೇಳದಲ್ಲಿ ಸುದೀರ್ಘ 42ಕ್ಕಿಂತಲೂ ಅಧಿಕ ವರ್ಷಗಳ ತಿರುಗಾಟ ನಡೆಸಿದ್ದಾರೆ. ಖ್ಯಾತನಾಮರೊಂದಿಗೆ ಪಳಗಿದವರು. ಇಂಥ ಕಲಾವಿದರ ಅಗಲಿಕೆಗೆ ಯಕ್ಷಗಾನ ಕಲಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.