ಬಿ.ಸಿ.ರೋಡ್ ನ ಕೈಕಂಬ ಸಮೀಪ ಎಲ್ಲೈಸಿ ಕಚೇರಿಯ ಮುಂಭಾಗ ಹೆದ್ದಾರಿಯ ಡಿವೈಡರ್ ಪಕ್ಕದಲ್ಲಿ ಮಣ್ಣಿನ ರಾಶಿ ಇದ್ದು, ಇದಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ಸವಾರರು ಬಿದ್ದ ಘಟನೆಗಳು ನಡೆದಿವೆ.
ಕೆಲ ದಿನಗಳಿಂದ ಇಲ್ಲಿ ಕೆಲಸಗಳು ನಡೆಯುತ್ತಿದ್ದು, ಮಣ್ಣನ್ನು ಹಾಗೆಯೇ ಬಿಟ್ಟು ಹೋದ ಪರಿಣಾಮ, ಈ ಭಾಗದಲ್ಲಿ ಮಂಗಳೂರಿನಿಂದ ಬಿ.ಸಿ.ರೋಡಿಗೆ ಸಂಚರಿಸುವ ವಾಹನಗಳ ಸವಾರರು ಗಲಿಬಿಲಿಗೊಳ್ಳುವಂತಾಗಿದೆ.
ರಾತ್ರಿಯ ವೇಳೆಗಂತೂ ತೀರಾ ಅಪಾಯಕಾರಿಯಾಗಿ ಈ ಮಣ್ಣಿನ ದಿಬ್ಬ ಕಾಣಿಸಿಕೊಂಡಿದ್ದು, ಇದನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಇನ್ನೂ ತೆರವುಗೊಳಿಸುವ ಕಾರ್ಯವನ್ನು ಮಾಡಿಲ್ಲ. ಇತ್ತೀಚೆಗೆ ದ್ವಿಚಕ್ರವಾಹನವೊಂದು ಮಣ್ಣಿನ ದಿಬ್ಬಕ್ಕೆ ತಾಗಿ ನೆಲಕ್ಕೆ ಬಿದ್ದ ಮೇಲೆ ಸ್ಥಳೀಯರೇ ಇಲ್ಲಿ ಎಚ್ಚರಿಕೆಯ ಫಲಕವನ್ನು ಹಾಕಿದ್ದಾರೆ. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಂಡು ಸಂಭಾವ್ಯ ಅಪಾಯವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ವಿನಂತಿಸಿದ್ದಾರೆ.