ಬಿಜೆಪಿ ಅಲ್ಪಸಂಖ್ಯಾತ ವಿರೋಧಿಯಲ್ಲ. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯಿಂದಾಗಿ ಅರಾಜಕತೆ ಉಂಟಾಗಿದ್ದು, ಯಾರು ತಪ್ಪು ಮಾಡುತ್ತಾರೋ ಅವರ ರಕ್ಣಣೆಗೆ ಸರಕಾರ ನಿಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬಂಟ್ವಾಳದ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೇಹಾ ಹತ್ಯೆ ವಿಚಾರದಲ್ಲಿ ಸಿಎಂ, ಡಿಸಿಎಂ ಹೇಳಿಕೆಗಳು ರಾಜ್ಯದ ಸಮಸ್ತ ಮಹಿಳೆಯರಿಗೂ ನೋವು ತಂದಿದೆ. ಕೇವಲ ಮತಕ್ಕೋಸ್ಕರ ಅಲ್ಪಸಂಖ್ಯಾತ ಸಮುದಾಯದ ಓಲೈಕೆಯನ್ನು ಕಾಂಗ್ರೆಸ್ ಮಾಡುತ್ತಿದೆ. ಇಂದು ಶಾಲಾ ಕಾಲೇಜಿಗೆ ಹೋಗುವ ಮಗಳು ಸುರಕ್ಷಿತವಾಗಿ ಮರಳುತ್ತಾಳಾ ಎಂಬ ಆತಂಕ ಎದುರಾಗಿದೆ. ನರೇಂದ್ರ ಮೋದಿ ಪರ ಹಾಡು ಬರೆದಾತನ ಮೇಲೆ ಹಲ್ಲೆಯಾಗಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಬಿಜೆಪಿ ಕಾರ್ಯಕರ್ತರಿಗಷ್ಟೇ ಅಲ್ಲ, ಜನರೂ ಭಯದಿಂದ ನರಳುತ್ತಿದ್ದಾರೆ ಎಂದರು.
ಪ್ರಧಾನಮಂತ್ರಿ ಹತ್ತು ವರ್ಷಗಳ ನಂತರವೂ ಜನಪ್ರಿಯತೆ ದುಪ್ಪಟ್ಟು ಗಳಿಸಿಕೊಂಡಿದ್ದಾರೆ ಎಂಬುದಕ್ಕೆ ನುಡಿದಂತೆ ನಡೆದ ಅವರ ಧೋರಣೆ, ಕೆಲಸ ಕಾರ್ಯಗಳು ಕಾರಣ. ದಕ್ಷಿಣ ಕನ್ನಡ ಕಾರ್ಯಕರ್ತರಲ್ಲಿ ಹಿಂದುತ್ವದ ರಕ್ತ ಕಣಕಣದಲ್ಲೂ ಹರಿಯುತ್ತಿದೆ ಎಂದವರು ಹೇಳಿದರು.
ಹಿಂದುತ್ವದೊಂದಿಗೆ ದಕ್ಷಿಣ ಕನ್ನಡ ಅಭಿವೃದ್ಧಿ: ಚೌಟ
ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ ಅಭಿವೃದ್ಧಿಶೀಲ ವಿಕಸಿತ ದಕ್ಷಿಣ ಕನ್ನಡ ಜಿಲ್ಲೆಯ ನಿರ್ಮಾಣ ಮಾಡುವುದು ತನ್ನ ಗುರಿ. ಎಲ್ಲರನ್ನೂ ಒಂದಾಗಿ ಕರೆದುಕೊಂಡು ಹೋಗಿ, ಹಿಂದುತ್ವದ ಆಧಾರದೊಂದಿಗೆ ಜಿಲ್ಲೆ ಅಭಿವೃದ್ಧಿ ಮಾಡುವೆ, ನಳಿನ್ ಕುಮಾರ್ ಕಟೀಲ್ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರಿಸುವೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಅವರು ಅಸಾಮಾನ್ಯ ಸಾಧನೆ ಮಾಡಿದ್ದಾರೆ. 2004ರಿಂದ 2014ರವರೆಗೆ ದೇಶ ಸಮಸ್ಯೆಗಳಲ್ಲಿ ಮುಳುಗಿತ್ತು. ಮತದಾರರು ನೀಡಿದ ಶಕ್ತಿ ಆಧಾರದಲ್ಲಿ ನರೇಂದ್ರ ಮೋದಿ ಮಾಡಿದ ಕೆಲಸಗಳನ್ನು ನಾವು ಗುರುತಿಸಬಹುದು. ಅವರ ಇಚ್ಛಾಶಕ್ತಿಯಿಂದಾಗಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವಾಗಿದೆ. ಮುಂದಿನ ಇಪ್ಪತ್ತೈದು ವರ್ಷ ಹಿಂದುತ್ವದ ಅಸ್ಮಿತೆಯ ಕಾಲ. ಈ ಚುನಾವಣೆ ರಾಷ್ಟ್ರವನ್ನು ಗೆಲ್ಲಿಸುವ ಕಾಲ. ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ರಾಷ್ಟ್ರವಿರೋಧಿ ಮಾನಸಿಕತೆ ಹೆಚ್ಚಾಗುತ್ತಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ, ಜೆಡಿಎಸ್ ಮುಖಂಡ ಅಕ್ಷಿತ್ ಸುವರ್ಣ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪೂಜಾ ಪೈ, ಜಗದೀಶ ಶೇಣವ, ಯತೀಶ್ ಆರ್ವಾರ್, ಕೆ.ಹರಿಕೃಷ್ಣ ಬಂಟ್ವಾಳ, ರಾಜೇಶ್ ಕಾವೇರಿ, ದೇವಪ್ಪ ಪೂಜಾರಿ, ದೇವದಾಸ ಶೆಟ್ಟಿ, ಕಿಶೋರ್ ಕುಮಾರ್, ಉದಯಕುಮಾರ್ ಶೆಟ್ಟಿ ಹಿರಿಯ ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಉಪಸ್ಥಿತರಿದ್ದರು. ಬಂಟ್ವಾಳ ಕ್ಷೇತ್ರ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿದರು. ಬಂಟ್ವಾಳ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ನಿರ್ವಹಿಸಿದರು. ಮತ್ತೋರ್ವ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ವಂದಿಸಿದರು. ಇದಕ್ಕೂ ಮುನ್ನ ಬಿ.ವೈ.ವಿಜಯೇಂದ್ರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಮಂಗಳೂರು ಮಾಜಿ ಮೇಯರ್ ಕವಿತಾ ಸನಿಲ್ ಸೇರ್ಪಡೆ:
ಇದೇ ವೇಳೆ ಮಂಗಳೂರು ಮಾಜಿ ಮೇಯರ್ ಕವಿತಾ ಸನಿಲ್ ಹಾಗೂ ಬಂಟ್ವಾಳ ಪುರಸಭಾ ಸದಸ್ಯ ಗಂಗಾಧರ ಪೂಜಾರಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಇವತ್ತು ನಮ್ಮ ಧರ್ಮ ಉಳಿದ ಮೇಲೆ ಜಾತಿ ಉಳೀತದೆ, ಹಿಂದುವಾಗಿ, ಧರ್ಮ ಉಳೀಬೇಕು ಎಂಬ ದೃಷ್ಟಿಯಿಂದ ಬಿಜೆಪಿ ಸೇರಿದ್ದೇನೆ ಎಂದು ಹೇಳಿದ ಕವಿತಾ ಸನಿಲ್, ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಸೇರಿದೆ ಎಂದರು.