ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶನಿವಾರ (ಏಪ್ರಿಲ್ 20) ಬಂಟ್ವಾಳದ ಗಾಣದದಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಸಭಾಂಗಣಕ್ಕೆ ಆಗಮಿಸಿ ಅಲ್ಲಿ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ಪ್ರಚಾರ ಮಾಡಲಿದ್ದಾರೆ.
ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಅವರು ಪಕ್ಷ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಶನಿವಾರ ಮಧ್ಯಾಹ್ನ 2.30ಕ್ಕೆ ಅವರು ಆಗಮಿಸಲಿದ್ದು, ಈ ಸಂದರ್ಭ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಲಿದ್ದಾರೆ. ಈಗಾಗಲೇ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ವಿನೂತನ ರೀತಿಯಲ್ಲಿ ಮನೆ ಮನೆ ಪ್ರಚಾರ ಮಾಡುವ ಮೂಲಕ ಕ್ಷೇತ್ರದ ಮೂಲೆಮೂಲೆಗಳಲ್ಲಿರುವ ಕಾರ್ಯಕರ್ತರೊಂದಿಗೆ ಮತದಾರರನ್ನು ತಲುಪಿದ್ದಾರೆ. ಅಭ್ಯರ್ಥಿ ಚೌಟ ಈಗಾಗಲೇ 5 ಬಾರಿ ಮತಯಾಚನೆಯಲ್ಲಿ ಭಾಗಿಯಾಗಿದ್ದಾರೆ. ಏ. 22 ರಂದು ಸೋಮವಾರ ಮತ್ತೆ ಬಂಟ್ವಾಳ ಕ್ಷೇತ್ರದಲ್ಲಿ ಸಂಚಾರ ಮಾಡಿ ವಿಭಿನ್ನ ರೀತಿಯಲ್ಲಿ ಮತಯಾಚನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಭಾನುವಾರ ಏ.21ರಂದು ಕ್ಷೇತ್ರದಲ್ಲಿ ಮಹಾಭಿಯಾನ ಕಾರ್ಯ ನಡೆಯಲಿದ್ದು, ಶಾಸಕರು ಹಾಗೂ ಹಿರಿಯ ಜನಪ್ರತಿನಿಧಿಗಳು ಜೊತೆಯಾಗಿ ತೊಡಗಿಸಕೊಳ್ಳಲಿದ್ದಾರೆ. 22ರಂದು ಸೋಮವಾರ ಅಭ್ಯರ್ಥಿ ಬ್ರಿಜೇಶ್ ಚೌಟ ಅವರ ಪ್ರವಾಸ ಬಂಟ್ವಾಳದಲ್ಲಿ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ಕುಲಾಲ ಸಮುದಾಯ ಪ್ರಮುಖರ ಜೊತೆ ಸಮಾಲೋಚನೆ, 10 ಗಂಟೆಗೆ ವಿಶ್ವಕರ್ಮ ಸಮುದಾಯ ಪ್ರಮುಖರ ಜೊತೆ ಸಮಾಲೋಚನೆ, 11.30 ರಿಂದ ಮಧ್ಯಾಹ್ನ 1.00 ಗಂಟೆ ತನಕ ಬಿ.ಸಿ.ರೋಡ್ ಕೈಕಂಬದಿಂದ ರಿಕ್ಷಾ ಪಾರ್ಕ್ ಗಳಲ್ಲಿ ಮತ್ತು ನಗರದಲ್ಲಿ ಮತಯಾಚನೆ ಮಾಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಪ್ರಬುದ್ಧರ ಜೊತೆ ಸಂವಾದ ನಡೆಸಲಿದ್ದಾರೆ. ಸಂಜೆ 4 ಗಂಟೆಯಿಂದ ವಿಟ್ಲಪಡ್ನೂರು, ಜರಗಲಿದೆ. 6.30ಕ್ಕೆ ಸಾಲೆತ್ತೂರು ಜಂಕ್ಷನ್ ನಲ್ಲಿ. ರಾತ್ರಿ 7.30ಕ್ಕೆ ಕಲ್ಲಡ್ಕ ಜಂಕ್ಷನ್ ನಲ್ಲಿ ಸಭೆ ನಡೆಯಲಿದೆ ಎಂದರು.
ದೇಶದ ಭದ್ರತೆ ದೃಷ್ಟಿಯಿಂದ ಮೋದಿ ಪ್ರಧಾನಿಯಾಗಬೇಕು: ದೇಶದ ಭದ್ರತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ನರೇಂದ್ರ ಮೋದಿಯವರು ಮೂರನೇ ಭಾರಿಗೆ ಪ್ರಧಾನಿಯಾಗಬೇಕಾದ ಅನಿವಾರ್ಯತೆಯಿದೆ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆ ಅತಿ ಮಹತ್ವದ್ದು ಎಂದು ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಈ ಸಂದರ್ಭ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ನೆಲೆಯಾಗಿದ್ದು, ಸತತ ಮೂರು ದಶಕಗಳಿಂದ ಭಾರತೀಯ ಜನತಾ ಪಾರ್ಟಿ ಗೆಲ್ಲುತ್ತಿರುವ ಕಾರಣ ಕಾಂಗ್ರೆಸ್ ಪಕ್ಷವು ಜಾತಿ-ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದೆ, ಕೆಲ ಸ್ಥಳೀಯ ಸಂಘಟನೆಗಳೊಂದಿಗೆ ಸೇರಿ ಚುನಾವಣೆಯಲ್ಲಿ ನೋಟ ಚಲಾಯಿಸಲು ಕೂಡ ಪ್ರೇರೇಪಿಸುತ್ತಿದ್ದು, ಕಾಂಗ್ರೆಸ್ ಪಕ್ಷ ಮತದಾರರ ದಿಕ್ಕುತಪ್ಪಿಸುವ ಮೂಲಕ ಮತದಾರನ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿದೆ ಎಂದರು. ಈ ಚುನಾವಣೆ ದೇಶದ ಚುನಾವಣೆ ಹಾಗಾಗಿ ಜಾತಿ ಹೆಸರಲ್ಲಿ ಚುನಾವಣೆ ನಡೆಯುವುದಿಲ್ಲ. ಕೆಲವರು ಜಾತಿ ಹೆಸರಿನಲ್ಲಿ ಗುಪ್ತವಾಗಿ ಮತಯಾಚನೆ ಮಾಡುತ್ತಾ ಇದ್ದಾರೆ. ದೇಶದ 140 ಕೋಟಿ ಜನರು ಈ ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ಅಪೇಕ್ಷೆಯನ್ನು ಹೊಂದಿದ್ದಾರೆ ಎಂದವರು ಹೇಳಿದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ಬಿಜೆಪಿ ಮತ್ತೆ ಪ್ರಧಾನಿಯಾಗ ಬೇಕು ಎಂಬ ಎಲ್ಲರ ಕನಸು ನನಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಜಿಲ್ಲೆಯ ಅಭ್ಯರ್ಥಿ ಬ್ರಿಜೇಶ್ ಚೌಟ ಯುವ ನಾಯಕನಾಗಿದ್ದು, ಮೂರು ಲಕ್ಷಕ್ಕೂ ಅಧಿಕ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ,ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಹಿಂದುಳಿದ ವರ್ಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಉಪಾಧ್ಯಕ್ಷ ಚಿದಾನಂದ ರೈ ಕಕ್ಯ ಮತ್ತಿತರರು ಉಪಸ್ಥಿತರಿದ್ದರು.