ಸೋಲಿನ ಭೀತಿಯಲ್ಲಿರುವ ಬಿಜೆಪಿ ಅಪಪ್ರಚಾರ ತಂತ್ರಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನತೆ ವಿಚಲಿತರಾಗಬೇಡಿ ಎಂದು ಕಾಂಗ್ರೆಸ್ ನ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಆರ್. ಪದ್ಮರಾಜ್ ಪೂಜಾರಿ ಹೇಳಿದ್ದಾರೆ.
ಗುರುವಾರ ರಾತ್ರಿ ಬಿ.ಸಿ.ರೋಡ್ ನ ಪೊಳಲಿ ದ್ವಾರದಿಂದ ಬಂಟ್ವಾಳದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ವರೆಗೆ ರೋಡ್ ಶೋ ನಡೆಸಿದ ಬಳಿಕ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸೋಲಿನ ಭೀತಿಯಲ್ಲಿರುವ ಬಿಜೆಪಿ ಅಪಪ್ರಚಾರ ತಂತ್ರಗಳನ್ನು ಅನುಸರಿಸುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನತೆ ಇದರಿಂದ ವಿಚಲಿತರಾಗಬೇಡಿ ಎಂದು ಕಾಂಗ್ರೆಸ್ ನ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಆರ್. ಪದ್ಮರಾಜ್ ಪೂಜಾರಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪರವಾಗಿ ಕೈಕಂಬ ಕ್ರಾಸ್ ನಿಂದ ಬಿ.ಸಿ. ರೋಡ್ ವರೆಗೆ ಬೃಹತ್ ರೋಡ್ ಶೋ ಗುರುವಾರ ರಾತ್ರಿ ನಡೆಯಿತು. ಬಳಿಕ ಬಂಟ್ವಾಳದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಗುರುವಾರ ರಾತ್ರಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಅಭಿವೃದ್ಧಿ ವಿಚಾರದ ಬದಲು ಸಾಮರಸ್ಯಕ್ಕೆ ಕೊಡಲಿಯೇಟು ನೀಡುವ ಮೂಲಕ ಅಧಿಕಾರಕ್ಕೆ ಬಂದ ವಿರೋಧ ಪಕ್ಷಕ್ಕೆ ನಿಮ್ಮ ಸಾಧನೆಯೇನು ಎಂದು ಸವಾಲು ಹಾಕಿದ್ದಕ್ಕೆ ಇದುವರೆಗೂ ಉತ್ತರವಿಲ್ಲ ಎಂದು ಹೇಳಿದರು.
ಹಿಂದೂ ಧರ್ಮ ನನಗೆ ಕಲಿಸಿಕೊಟ್ಟ ಜ್ಞಾನದಿಂದ ಬಡವರ ಕಣ್ಣೀರೊರೆಸುವ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇದೇ ನಿಜವಾದ ಹಿಂದೂ ಧರ್ಮ ಎಂದು ನಾನು ನಂಬಿಕೊಂಡು ಬಂದಿದ್ದೇನೆ. ಇದೀಗ ನೈಜ ಹಿಂದೂ ಧರ್ಮವನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವು ಮಾಡಲಿದ್ದೇವೆ. ಮಹಾನಗರಿಗಳಂತೆ ನಮ್ಮ ಮಂಗಳೂರು ದಿನದ ಇಪ್ಪತ್ತು ಗಂಟೆ ಲವಲವಿಕೆಯಿಂದ ಕೂಡಿರಬೇಕಿತ್ತು. ಆದರೆ ಕೋಮು ಹಣೆಪಟ್ಟಿ ಬಿದ್ದ ಕಾರಣ ಸಂಜೆ ಏಳು ಗಂಟೆಗೆ ಮಂಗಳೂರು ಸ್ತಬ್ದವಾಗಿ ಬಿಡುತ್ತದೆ. ಹೀಗಾಗಲು ಅವಕಾಶ ನೀಡಬಾರದು. ಕೋಮು ಸಂಘರ್ಷದ ಹಣೆಪಟ್ಟಿ ಕಳಚಿ, ಉದ್ಯೋಗ ಸೃಷ್ಟಿ ಜಿಲ್ಲೆಯಲ್ಲಿ ಆಗಬೇಕಿದೆ. ನಮ್ಮ ಊರಿನ ಯುವಕರು ನಮ್ಮೂರಲ್ಲೇ ದುಡಿಯಬೇಕು. ತಮ್ಮ ಪೋಷಕರ ಜೊತೆಯೇ ಇರಬೇಕು. ಇದಕ್ಕಾಗಿ ಕಾಂಗ್ರೆಸ್ ಗೆಲ್ಲಬೇಕು. ಈಗಾಗಲೇ ಗೆಲ್ಲುವ ಸೂಚನೆ ನಮಗೆ ಸ್ಪಷ್ಟವಾಗಿದೆ. ಹಾಗೆಂದು ಮೈಮರೆಯುವಂತಿಲ್ಲ. ಈಗಾಗಲೇ ಅಪಪ್ರಚಾರದ ಕೆಲಸಕ್ಕೆ ಮುಂದಾಗಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳದೇ, ಧೈರ್ಯ ಕಳೆದುಕೊಳ್ಳದೇ ಗೆಲುವಿಗಾಗಿ ಶ್ರಮಿಸಿ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾದವರು ಅಬಿವೃದ್ಧಿಗೆ ಕಾರಣರಾದವರು. ಬಂದರು, ವಿಮಾನ ನಿಲ್ದಾಣ, ಇಂಜಿನಿಯರಿಂಗ್ ಕಾಲೇಜು ಸಹಿತ ಸಮಗ್ರ ಅಭಿವೃದ್ಧಿ ಕಾಂಗ್ರೆಸ್ ನಿಂದ ಆಯ್ಕೆಯಾದವರು ಇರುವಾಗ ಆಗಿದೆ. ಅದಾದ ಬಳಿಕ ಬಿಜೆಪಿಯಿಂದ ಆಯ್ಕೆಯಾದ ಲೋಕಸಭಾ ಸದಸ್ಯರಿಂದ ಹೇಳಿಕೊಳ್ಳುವ ಯಾವುದೇ ಅಭಿವೃದ್ಧಿ ಆಗಿಲ್ಲ. ಭೂಸಾರಿಗೆ ಸಚಿವ ಆಸ್ಕರ್ ಫೆರ್ನಾಂಡೀಸ್ ಇದ್ದಾಗ ಹಾಸನ ಮಂಗಳೂರು ರಸ್ತೆ ಅಭಿವೃದ್ಧಿ ಆಗುತ್ತಿದೆ ಎಂದರು. ಈ ಭಾಗದ ಸಾಮಾಜಿಕ ಸಾಮರಸ್ಯ ಉಳಿಯಲು ಕಾಂಗ್ರೆಸ್ ಗೆಲ್ಲಬೇಕಾಗಿದೆ ಎಂದರು.
ಡಿಸಿಸಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಲೋಕಸಭೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಸಂವಿಧಾನ ಉಳಿಸಬೇಕು ಎಂದರು.
ಈ ಸಂದರ್ಭ ಪಕ್ಷ ಪ್ರಮುಖರಾದ ಅಶ್ವನಿ ಕುಮಾರ್ ರೈ, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಪದ್ಮಶೇಖರ ಜೈನ್, ಬಿ.ಎಂ.ಅಬ್ಬಾಸ್ ಆಲಿ, ಸುದರ್ಶನ ಜೈನ್, ಸಂಜೀವ ಪೂಜಾರಿ, ಜಯಂತಿ ಪೂಜಾರಿ, ಅನ್ವರ್ ಕರೋಪಾಡಿ, ಪದ್ಮನಾಭ ರೈ, ಮೋಹನ ಗೌಡ ಕಲ್ಮಂಜ, ಜೋಸ್ಫಿನ್ ಡಿಸೋಜ, ಇಬ್ರಾಹಿಂ ನವಾಝ್ ಬಡಕಬೈಲ್, ಸುರೇಶ್ ನಾವೂರು, ನಾರಾಯಣ ನಾಯ್ಕ್, ಜಗದೀಶ್ ಕೊಯ್ಲ, ಬೇಬಿ ಕುಂದರ್, ಜನಾರ್ದನ ಚಂಡ್ತಿಮಾರ್ ಮೊದಲಾದವರು ಉಪಸ್ಥಿತರಿದ್ದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.