ಜಿಲ್ಲಾ ಸುದ್ದಿ

ನಾರಾಯಣಗುರುಗಳ ಸಂದೇಶ ಹಿಂದುಳಿದ ವರ್ಗಗಳಿಗೆ, ಶೋಷಿತರಿಗೆ ಪ್ರೇರಣೆ: ನಿಕೇತ್ ರಾಜ್ ಮೌರ್ಯ

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಮತಯಾಚನೆ

ಜಾಹೀರಾತು

ನಾರಾವಿಯಿಂದ ಅಳದಂಗಡಿವರೆಗೆ ನಡೆದ ಕಾಂಗ್ರೆಸ್ ರೋಡ್ ಶೋ
ಅಳದಂಗಡಿ: ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂದು ಕರೆ ನೀಡಿದ ನಾರಾಯಣಗುರುಗಳು, ಇದನ್ನ ಬಿಲ್ಲವ ಸಮುದಾಯಕ್ಕಷ್ಟೇ ಹೇಳಿಲ್ಲ. ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯಗಳನ್ನು ಉದ್ದೇಶಿಸಿ ಹೇಳಿದ್ದರು ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು.
ನಾರಾವಿಯಿಂದ ಅಳದಂಗಡಿವರೆಗೆ ಕಾಂಗ್ರೆಸ್ ರೋಡ್ ಶೋ ಬಳಿಕ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ನಾರಾಯಣಗುರು ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಿದರು. ಇದೇ ಹಾದಿಯಲ್ಲಿ ಬಸವಣ್ಣ, ಅಂಬೇಡ್ಕರ್ ಅವರು ಸಾಗಿದ್ದರು. ಇವರೆಲ್ಲರ ಉದ್ದೇಶ ಹಿಂದುಳಿದ ವರ್ಗಗಳ ಕಲ್ಯಾಣ. ಇದೀಗ ಜನಾರ್ದನ ಪೂಜಾರಿ ಅವರ ಶಿಷ್ಯ ಪದ್ಮರಾಜ್ ಆರ್. ಪೂಜಾರಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಹಿಂದುಳಿದ ವರ್ಗಗಳ ಧ್ವನಿಯಾಗಿ. ಸಣ್ಣಪುಟ್ಟ ಸಮುದಾಯಗಳ ಉದ್ಧಾರಕ್ಕಾಗಿ, ಎಲ್ಲಾ ದುರ್ಬಲ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯಲು ಪದ್ಮರಾಜ್ ಗೆಲ್ಲಬೇಕು. ಅವರು ಶಿಕ್ಷಣ, ಆರೋಗ್ಯದ ವಿಚಾರ ಬಿಟ್ಟು ಬೇರೇನನ್ನೂ ಮಾತನಾಡುತ್ತಿಲ್ಲ. ಹಾಗಾಗಿ ಈ ಬಾರಿ ಗೆದ್ದೇ ಗೆಲ್ತೀವಿ ಅನ್ನುವ ಆತ್ಮವಿಶ್ವಾಸದೊಂದಿಗೆ ಕೆಲ್ಸ ಮಾಡಿ ಎಂದರು.
ಗ್ಯಾರೆಂಟಿ ಯೋಜನೆಯಿಂದ ಜನರು ಸ್ವಾಭಿಮಾನದ ಬದುಕು ಕೊಟ್ಟಿಕೊಂಡಿದ್ದಾರೆ. ಆದರೆ ವಿಪಕ್ಷಗಳು ಶಕ್ತಿ ಯೋಜನೆಯಿಂದ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಸನಾಂಬೆ, ಶೃಂಗೇರಿ ಶಾರದೆಯ ದರ್ಶನಕ್ಕೆ ಬರುವ ಹೆಣ್ಣುಮಕ್ಕಳು, ದೇವರ ದರ್ಶನಕ್ಕೆ ಬಂದರೆ ಹಾಳಾಗುವುದು ಹೇಗೆ? ಅಪಪ್ರಚಾರ ನಡೆಸುವ ಬಿಜೆಪಿ ಇದೀಗ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಗ್ಯಾರೆಂಟಿ ಯೋಜನೆ ನೀಡುತ್ತಿದೆ. ಕಾಂಗ್ರೆಸಿನ ಯೋಜನೆಗಳನ್ನು ಕಾಪಿ ಮಾಡುತ್ತಿವೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ತಾನು ರಾಜಕೀಯಕ್ಕೆ ಬರ್ತೇನೆ, ಲೋಕಸಭಾ ಸದಸ್ಯ ಚುನಾವಣೆಗೆ ಟಿಕೇಟ್ ಪಡೆದುಕೊಳ್ಳುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ತುಳು ನಾಡಿನ ದೈವ – ದೇವರುಗಳ ಆಶೀರ್ವಾದದಿಂದ ನಾವು ಇಂದು ಈ ಮಟ್ಟಕ್ಕೆ ಏರಿದ್ದೇವೆ ಎಂದ ಅವರು, ಉಳಿದ ಹಬ್ಬಗಳಂತೆ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಬೇಕು. ಇಲ್ಲಿ ಯಾವುದೇ ದ್ವೇಷ ಭಾವನೆ ಹರಡುವುದು ಬೇಡ ಎಂದರು.
ತಾವು ದೇಶ ಪ್ರೇಮಿಗಳು, ಎದುರಿನವರು ದೇಶದ್ರೋಹಿಗಳು ಎಂದು ಬಿಜೆಪಿಗರು ಕರೆದುಕೊಳ್ಳುತ್ತಿದ್ದಾರೆ. ದೇಶಪ್ರೇಮಿಗಳು ಮನೆಮನೆಯ ಸ್ಥಿತಿಯನ್ನು ಗಟ್ಟಿಗೊಳಿಸಬೇಕಿತ್ತು. ಆದರೆ ಅವರು ಅನೇಕರ ಮನೆಗಳನ್ನು ಅನಾಥ ಮಾಡಿದ್ದಾರೆ. ಉದ್ಯೋಗ ಸೃಷ್ಟಿಸಿ ಯುವ ಜನಾಂಗಕ್ಕೆ ದಾರಿ ದೀಪವಾಗಬೇಕಿತ್ತು. ಆದರೆ ಬಿಜೆಪಿಗರು ಇಲ್ಲೇನು ಮಾಡಿದ್ದಾರೆ? ಅಭಿವೃದ್ಧಿ ಕಾರ್ಯ ಇಲ್ಲವೇ ಇಲ್ಲ. ಕನಿಷ್ಠ ಪಕ್ಷ ಕಾಂಗ್ರೆಸ್ ಸರಕಾರ ಜಿಲ್ಲೆಗೆ ತಂದಿರುವ ಯೋಜನೆಗಳನ್ನು ಮೇಲ್ದರ್ಜೆಗೇರಿಸಬೇಕಿತ್ತು. ಇದಾವುದನ್ನು ಮಾಡದೇ ಮನೆ – ಮನಗಳನ್ನು ಒಡೆದದ್ದು, ಮನೆಗಳನ್ನು ಅನಾಥವಾಗಿಸಿದ್ದೇ ಬಿಜೆಪಿಗರ ಸಾಧನೆ ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಇವತ್ತು ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಆಗಬೇಕಾಗಿದೆ. ಅಭಿವೃದ್ಧಿಯ ಮೌಲ್ಯಮಾಪನದ ಅಗತ್ಯವಿದೆ.
ಕರಾವಳಿಯಲ್ಲಿ ಹುಟ್ಟಿಕೊಂಡ ಬ್ಯಾಂಕ್ ಎಲ್ಲಿವೆ ಈಗ? ಜಿಲ್ಲೆಯ ಸಾಮರಸ್ಯವನ್ನು ಕೆದಕಿದವರು ಯಾರು ಎನ್ನುವುದು ತಿಳಿದುಕೊಳ್ಳಬೇಕಿದೆ. ಸ್ವಾಭಿಮಾನದ ಬದುಕು ನೀಡಿದ್ದು ಕಾಂಗ್ರೆಸ್. ನಿಮಗೆ ಅಹಿಂಸೆ ಬೇಕಿದ್ದರೆ ಕಾಂಗ್ರೆಸನ್ನು ಆಯ್ಕೆ ಮಾಡಿ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ಗ್ಯಾರೆಂಟಿ ಅಲೆ ಇದೆ, ಪದ್ಮರಾಜ್ ಅಲೆ ಇದೆ. ಜಿಲ್ಲೆಯಲ್ಲಿ ಜನಾರ್ದನ ಪೂಜಾರಿ ಅವರ ಶಿಷ್ಯ ಪದ್ಮರಾಜ್ ಅವರನ್ನು ಗೆಲ್ಲಿಸಿಕೊಡಬೇಕು ಎಂದರು.
ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ, ಹತ್ತು ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಿರುವ ಹೆಮ್ಮೆ ಕಾಂಗ್ರೆಸ್ ಸರಕಾರದ್ದು. ಆದ್ದರಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಪದ್ಮರಾಜ್ ಆರ್. ಪೂಜಾರಿ ಗೆಲ್ಲಬೇಕು ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಪ್ರಮುಖರಾದ ರಂಜನ್ ಗೌಡ, ನಾಗೇಶ್ ಗೌಡ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್, ಪ್ರತಿಭಾವಂತ ಕುಳಾಯಿ, ಶ್ಯಾಲೆಟ್ ಪಿಂಟೋ, ಶಕುಂತಳಾ ಗಟ್ಟಿ, ಧರ್ಣೇಂದ್ರ ಕುಮಾರ್, ವಂದನಾ ಭಂಡಾರಿ, ಲಕ್ಷ್ಮೀಶ್ ಗಬ್ಬಲಡ್ಕ ಮೊದಲಾದವರು ಉಪಸ್ಥಿತರಿದ್ದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಣ ಸ್ವಾಗತಿಸಿದರು. ಶೇಖರ್ ಕುಕ್ಕೆಟ್ಟಿ ವಂದಿಸಿದರು.
ಧಾರ್ಮಿಕ ಕೇಂದ್ರಗಳಿಗೆ ಭೇಟಿ:
ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾ, ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಅಳದಂಗಡಿ ಶ್ರೀ ಸತ್ಯದೇವತೆ ಸಾನಿಧ್ಯ, ನಾರಾವಿ ದಿಗಂಬರ ಜಿನ ಚೈತ್ಯಾಲಯ ಧರ್ಮನಾಥ ಸ್ವಾಮಿ ಬಸದಿ, ನಾರಾವಿ ಸಂತ ಅಂಥೋನಿ ಚರ್ಚ್ ಗೆ ಭೇಟಿ ನೀಡಿದರು.
ರವಿ ಕೋಟ್ಯಾನ್, ನಾರಾವಿ ದಿಗಂಬರ ಜಿನ ಚೈತ್ಯಾಲಯ ಧರ್ಮನಾಥ ಸ್ವಾಮಿ ಬಸದಿಯ ಅಧ್ಯಕ್ಷ ನಿರಂಜನ್ ಅಜ್ರಿ, ಕಾರ್ಯಾಧ್ಯಕ್ಷ ಪ್ರೇಮ್ ಕುಮಾರ್, ಮಹಾವೀರ್ ಜೈನ್, ಶಿಶುಪಾಲ್ ಜೈನ್, ವಿನಯ್ ಕುಮಾರ್, ಜಿನೇಂದ್ರ ಜೈನ್, ಶಾಂತಿರಾಜ್ ಜೈನ್, ಪ್ರಸಾದ್ ಜೈನ್, ಸೂರಜ್ ಜೈನ್, ನಾರಾವಿ ಸಂತ ಅಂಥೋನಿ ಚರ್ಚ್ ನ ಉಪಾಧ್ಯಕ್ಷ ಸಂಜಯ್ ಮಿರಾಂದಾ, ಕಾರ್ಯದರ್ಶಿ ಏವ್ಜಿನ್ ರೋಡ್ರಿಗಸ್, ಡೈನಾ ಮೊದಲಾದವರು ಉಪಸ್ಥಿತರಿದ್ದರು.
ಅಳದಂಗಡಿ ಅರಮನೆಗೆ ಭೇಟಿ: ಪದ್ಮರಾಜ್ ಆರ್. ಪೂಜಾರಿ ಅವರು ಅಳದಂಗಡಿ ಅರಮನೆಗೆ ಭೇಟಿ ನೀಡಿದರು‌. ಅರಮನೆಯ ಪದ್ಮಪ್ರಸಾದ್ ಅಜಿಲ ಉಪಸ್ಥಿತರಿದ್ದರು.
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.