ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಪ್ರವಾಸ ಮಾಡಿದ್ದು, ನೇರವಾಗಿ ಕಾರ್ಯಕರ್ತರೊಂದಿಗೆ ಸೇರಿ ಮತದಾರರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಲಾಲ್ ಕೃಷ್ಣ ಅಡ್ವಾಣಿ ಅವರಿಂದಲೇ ಸೈ ಎನ್ನಿಸಿಕೊಂಡಿದ್ದ ಸುಳ್ಯ ಕ್ಷೇತ್ರದ ಶಕ್ತಿಯನ್ನು ಮತ್ತೆ ದೇಶಕ್ಕೆ ಪರಿಚಯಿಸೋಣ ಎಂದರು.
ಬುಧವಾರ ಬೆಳಗ್ಗೆ ಮಂಡೆಕೋಲು ಸಹಕಾರಿ ಸಂಘದ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಚೌಟರು ಪ್ರವಾಸದ ಮಧ್ಯೆ ನಿವೃತ್ತ ಯೋಧರಾದ ಅಡ್ಡಂತಡ್ಕ ದೇರಣ್ಣ ಗೌಡ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದರು ಬಳಿಕ ಆಧುನಿಕ ಸುಳ್ಯದ ನಿರ್ಮಾತೃ ಕೆವಿಜಿಯವರು ಕಟ್ಟಿದ ಕೆವಿಜಿ ವಿದ್ಯಾಸಂಸ್ಥೆಗೆ ಭೇಟಿಯಿತ್ತು ಅಲ್ಲಿನ ಬೋಧಕ ಮತ್ತು ಬೋಧಕೇತರ ಸಿಬಂದಿಯಲ್ಲಿ ಮತಯಾಚನೆ ಮಾಡಿದ್ದಾರೆ. ಸುಳ್ಯ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದ್ದಾರೆ.
ಅರಂತೋಡು ಸಹಕಾರಿ ಸಂಘದ ಸಭಾಭವನದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಚೌಟರು, ಅಲ್ಲಿಯೇ ಸಮೀಪದ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಿ ದೇವರ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ, ಪಕ್ಷದ ಹಿರಿಯರಾದ ಬಿಕೆ ಬೆಳ್ಯಪ್ಪ ಗೌಡ ಕಡ್ತಲ್ಕಜೆ ಇವರ ಮನೆಗೆ ಭೇಟಿ ನೀಡಿದ್ದಾರೆ. ಆನಂತರ, ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದಿದ್ದಾರೆ. ಹರಿಹರದಲ್ಲಿ ಬಾಳುಗೋಡು- ಕೊಲ್ಲಮೊಗ್ರ ಗ್ರಾಮ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದರು. ಆಬಳಿಕ ಕಡಬ ತಾಲೂಕಿಗೆ ತೆರಳಿದ ಬ್ರಿಜೇಶ್ ಚೌಟ, ಕೊಂಬಾರು ಗ್ರಾಮದ ಬೋಲ್ನಡ್ಕದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.
ಮರ್ದಾಳ ಮಹಾಲಿಂಗೇಶ್ವರ ದೇವಸ್ಥಾನ, ಇಚ್ಲಂಪಾಡಿ ಉಳ್ಳಾಲ್ತಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಇದೇ ವೇಳೆ, ಗೋಳಿತೊಟ್ಟು ಸಿದ್ಧಿವಿನಾಯಕ ಸಭಾಭವನದಲ್ಲಿ ಕಾರ್ಯಕರ್ತರ ಸಭೆ ನಡೆಸಿ, ದೇಶದ ಭವಿಷ್ಯಕ್ಕಾಗಿ ಮೋದಿ ಸರಕಾರ ಏಕೆ ಅಗತ್ಯ ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿದರು. ಸುಳ್ಯದಲ್ಲಿ ಹಿಂದಿನಿಂದಲೂ ಬಿಜೆಪಿಗೆ ಅತಿ ಹೆಚ್ಚು ಲೀಡ್ ಕೊಡುವ ಕ್ಷೇತ್ರ. ಆ ದಾಖಲೆಯನ್ನು ಉಳಿಸಿಕೊಳ್ಳಬೇಕೆಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.