ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಲು ಗುರುವಾರದಿಂದ (ಏ.18ರಿಂದ) ಚುನಾವಣಾ ದಿನ ಸೇರಿ ಒಂಬತ್ತು ದಿನಗಳಿದ್ದು ಈ ಒಂಬತ್ತು ದಿನಗಳಲ್ಲಿ ಬಿಜೆಪಿ ಮಹಿಳಾ ಘಟಕ ವಿಭಿನ್ನವಾಗಿ ಪ್ರಚಾರ ಕೈಗೊಳ್ಳಲಿದೆ. ಏ.26ರಂದು ಮತದಾನ ನಡೆಯುವ ಎಲ್ಲ ಬೂತ್‌ಗಳಲ್ಲಿ ಮಹಿಳಾ ಮತದಾರರೇ ಮೊದಲು ಮತ ಚಲಾಯಿಸುವಂತೆ ಮಾಡಲು ಮನೆಮನೆಗೆ ತೆರಳಿ ಪ್ರಚಾರ ಕೈಗೊಳ್ಳಲಿದ್ದಾರೆ.
ಚೈತ್ರ ಮಾಸದ ಮೊದಲ ದಿನದ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು, ನಾರಿ ಶಕ್ತಿ ಸಮಾವೇಶದಲ್ಲಿ ಹಾಜರಿದ್ದ ಮತದಾರರಲ್ಲಿ ಆಯಾ ಬೂತ್‌ಗಳಲ್ಲಿ ಮಹಿಳಾ ಮತದಾರರು ಮೊದಲು ನಿಂತು ತನಗೆ ಮತ ಚಲಾಯಿಸಿ ಆಶೀರ್ವದಿಸುವಂತೆ ಮನವಿ ಮಾಡಿದ್ದರು. ಒಂಬತ್ತು ಮಹಿಳೆಯರು ತಮ್ಮ ತಮ್ಮ ಬೂತ್‌ಗಳಲ್ಲಿ ಮೊದಲು ಬಿಜೆಪಿಗೆ ಮತ ಚಲಾಯಿಸಿದರೆ ಅದು ಶುಭಾರಂಭವಾಗಲಿದೆ. ದೇವೀಶಕ್ತಿಯನ್ನು ಪೂಜಿಸುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೂರನೇ ಅವಧಿಗೆ ನವದುರ್ಗೆಯರು ನೀಡುವ ಆಶೀರ್ವಾದವಾಗಲಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕವಾಗಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾವು ವಿಭಿನ್ನ ಪ್ರಚಾರ ಕಾರ್ಯದ ಮೂಲಕ ತಮ್ಮ ತಮ್ಮ ಬೂತ್‌ಗಳಲ್ಲಿ ಮಹಿಳೆಯರೇ ಮೊದಲು ನಿಂತು ಕ್ಯಾ.ಬ್ರಿಜೇಶ್ ಚೌಟರಿಗೆ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳಲಿದೆ.
ಶ್ರೀರಾಮ ನವಮಿ ಶುಭ ಸಂದರ್ಭದಲ್ಲಿ ಮಹಿಳಾ ಘಟಕವು ಈ ಅಭಿಯಾನ ಅಧಿಕೃತವಾಗಿ ಆರಂಭಿಸಿದೆ. ರಾಮ ರಾಜ್ಯದ ಪರಿಕಲ್ಪನೆ ಹಿಡಿದು ಹೊರಟಿರುವ ಕ್ಯಾ.ಬ್ರಿಜೇಶ್ ಚೌಟರಿಗೆ ಬೆಂಬಲವಾಗಿ ತಾಯಂದಿರ ಕೊಡುಗೆ ಇದು. ಮುಂದಿನ ಒಂಬತ್ತು ದಿನ ನಮ್ಮ ನಮ್ಮ ಬೂತ್‌ಗಳಲ್ಲಿ ಒಂಬತ್ತು ಮಹಿಳೆಯರ ತಂಡ ಮಾಡಿ ಮನೆ ಮನೆಗೆ ಭೇಟಿ ನೀಡಿ ಮಹಿಳೆಯರೇ ಮೊದಲ ಮತ ನೀಡುವಂತೆ ಮನವಿ ಮಾಡಲಿದ್ದೇವೆ ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ. ಮಂಜುಳಾ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ