ಪ್ರಧಾನಿ ಮೋದಿಯವರು ಮಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ ರೋಡ್ ಶೋ ನಡೆಸಿದ್ದು, ಅವರ ಮಂಗಳೂರು ಭೇಟಿ ಇದು ಹತ್ತನೇ ಬಾರಿಯದ್ದು.
ಈ ಹಿಂದೆಲ್ಲಾ ಬೃಹತ್ ಸಭೆಗಳನ್ನು ಉದ್ದೇಶಿ ಮಾತನಾಡಿ ತೆರಳುತ್ತಿದ್ದ ಮೋದಿ ಈ ಬಾರಿ ಅಭಿಮಾನಿಗಳಿಗೆ ಕೈಬೀಸುತ್ತಲೇ ರೋಡ್ ಶೋ ನಡೆಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆಗೈದ ಮೋದಿಯವರನ್ನು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕಡೆಗೋಲು ಹಿಡಿದ ಉಡುಪಿ ಕೃಷ್ಣನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲಿಂದಲೇ ಮೋದಿಯವರು ವಾಹನ ಏರಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿದ್ದ ಮಾಜಿ ಶಾಸಕ ಯೋಗೀಶ್ ಭಟ್ ಅವರನ್ನು ಕಂಡು ಮೋದಿಯವರು, ಕೈಸಾ ಹೋ ಭಟ್ ಜೀ ಅಂತ ಹೇಳಿ ಹತ್ತಿರ ಬಂದಿದ್ದಾರೆ. ಯೋಗೀಶ್ ಭಟ್ ಅವರ ಕಣ್ಣು ಮಂಜಾಗಿರುವುದನ್ನು ತಿಳಿದು ಕಣ್ಣಿನ ಸಮಸ್ಯೆಯೇನು ಎಂದು ಕೇಳಿದ್ದಾರೆ. ಯೋಗೀಶ್ ಭಟ್ ಅವರು ತಮ್ಮ ಕಣ್ಣಿಗೆ ಸಮಸ್ಯೆ ಆಗಿರುವುದನ್ನು ಮೋದಿ ಬಳಿ ಹೇಳಿಕೊಂಡಿದ್ದಾರೆ. ಮೋದಿ ಅವರಿಗೆ ಗುಜರಾತ್ ಮುಖ್ಯಮಂತ್ರಿ ಆಗೋದಕ್ಕೂ ಮೊದಲೇ ಯೋಗೀಶ್ ಭಟ್ ಅವರ ಪರಿಚಯ ಇತ್ತು.
ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಎಂಪೈರ್ ಮಾಲ್ ಬಳಿ ಜನರ ನಡುವೆ ಕಲಾವಿದರೊಬ್ಬರು ಕೈಯಲ್ಲಿ ಬಿಡಿಸಿದ ಮೋದಿಯ ತೈಲ ಚಿತ್ರವನ್ನು ತೋರಿಸಿದ್ದಾರೆ. ತೊಕ್ಕೊಟ್ಟಿನ ಪಿಲಾರ್ ನಿವಾಸಿ ಚಿತ್ರ ಕಲಾವಿದ ಕಿರಣ್ ಮೋದಿಯವರ ತೈಲ ಚಿತ್ರ ಬಿಡಿಸಿ ತಂದಿದ್ದರು. ಅದನ್ನು ನೋಡಿದ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಚಿತ್ರವನ್ನು ಎಸ್ ಪಿಜಿ ಮೂಲಕ ಪಡೆದುಕೊಳ್ಳಲು ಸೂಚಿಸಿದ್ದಾರೆ. ಎಸ್ ಪಿಜಿ ಭದ್ರತಾ ಸಿಬಂದಿ ತೈಲ ಚಿತ್ರವನ್ನು ಪಡೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಎರಡು ವರ್ಷಗಳ ಹಿಂದೆ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ತಾಯಿ ರತ್ನಾವತಿ ಬಳಿ ನಿಂತು ಕೈಮುಗಿದು ನಮಸ್ಕರಿಸಿ ಮೋದಿ ಮುಂದೆ ಸಾಗಿದ್ದು ಕಂಡುಬಂತು.