ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿ ವಿಶ್ವ ಆಟಿಸಂ ಜಾಗೃತಿ ದಿನಾಚರಣೆ ನಡೆಯಿತು. ಆಟಿಸಂ ಮಕ್ಕಳ ತರಬೇತಿ ಹಾಗೂ ಅಭಿವೃದ್ಧಿಗಾಗಿ ಕೆಲಸಮಾಡುತ್ತಿರುವ ಬಿ.ಸಿ.ರೋಡಿನ ವಿಕಾಸಂ ಸೇವಾ ಫೌಂಡೇಶನ್ ಸಂಸ್ಥೆ ಹಾಗೂ ವಿಟ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ನೋಟರಿ ಮತ್ತು ನ್ಯಾಯವಾದಿ ಪಿ.ಜಯರಾಮ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಟಿಸಂ ಮಕ್ಕಳು ಸಹಿತ ವಿಶೇಷ ಮಕ್ಕಳ ಸೇವೆಗೆ ವಿಶೇಷವಾದ ಕಾಳಜಿಯೂ ಬೇಕಾಗಿದ್ದು, ಇಂಥ ಪ್ರಕ್ರಿಯೆಗಳಿಂದ ಮಕ್ಕಳ ಹೆತ್ತವರಲ್ಲೂ ಆತ್ಮವಿಶ್ವಾಸ ಮೂಡಿಸುವ ಕಾರ್ಯ ನಡೆಯುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಿಎಎಸ್ ಎಫ್ ಸಂಸ್ಥೆಯ ಡಿಜಿಎಂ ರಾಜಶೇಖರ ಭಟ್ ಕಾಕುಂಜೆ, ಸ್ವತಃ ಹೆತ್ತವರಾಗಿ ಮಗಳ ನ್ಯೂನತೆಯ ಸವಾಲನ್ನು ನಿಭಾಯಿಸಿದ ರೀತಿಯನ್ನು ವಿವರಿಸಿದರು. ಎನ್ನೆಸ್ಸೆಸ್ ಘಟಕ ಯೋಜನಾಧಿಕಾರಿ ಡಾ. ಜ್ಯೋತಿ ರೈ ಅತಿಥಿಗಳಾಗಿ ಶುಭ ಹಾರೈಸಿದರು.ವಿಕಾಸಂ ಸಂಸ್ಥೆಯ ಸಹಸಂಸ್ಥಾಪಕರಾದ ಧರ್ಮಪ್ರಸಾದ್ ರೈ ಅಧ್ಯಕ್ಷತೆಯನ್ನು ವಹಿಸಿದರು. ವಿಕಾಸಂ ಸಂಸ್ಥೆಯ ಇನ್ನೋರ್ವ ಸಹಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಆಟಿಸಂ ಸಮಸ್ಯೆಯ ಹಾಗೂ ನಿಭಾವಣೆಯ ಬಗ್ಗೆ ಅರಿವು ಕಾರ್ಯಕ್ರಮ ನಡೆಸಿಕೊಟ್ಟರು.