ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರ “ಅಚ್ಚೇ ದಿನ್” ನಿಂದ “ಅಮೃತ ಕಾಲ” ದ ವರೆಗೆ ಒಂದು ದಶಕದಲ್ಲಿನ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ವಿಶ್ಲೇಷಣೆ ಮಾಡಿದರೆ ಬಿಜೆಪಿ ನೇತೃತ್ವದ ಸರಕಾರ ದೇಶದ ಜನರ ಸಂಪತ್ತನ್ನು ಕೆಲವೇ ಶತ ಕೋಟ್ಯಾಧಿಪತಿಗಳಿಗೆ ಧಾರೆ ಎರೆದಿದೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ, ಡಾ.ಸಿದ್ಧನಗೌಡ ಪಾಟೀಲ್ ಅಭಿಪ್ರಾಯ ಪಟ್ಟರು.
ಬಂಟ್ವಾಳದ ಬೈಪಾಸಿನಲ್ಲಿರುವ ಪಕ್ಷದ ಬಂಟ್ವಾಳ ತಾಲೂಕು ಕಚೇರಿಯ ಎ.ಶಾಂತಾರಾಮ ಪೈ ಸ್ವಾರಕ ಸಭಾ ಭವನದಲ್ಲಿ ಸಿಪಿಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಂವಿಂಧಾನ, ಪ್ರಜಾತಂತ್ರ, ಬಹುತ್ವ ಭಾರತ ಉಳಿಸಲು ಎಂಬ ಶೀರ್ಷೀಕೆಯಡಿಯಲ್ಲಿ ನಡೆದ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಿಪಿಐ(ಎಂ) ಪಕ್ಷದ ದ.ಕ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಮಾತನಾಡಿದರು. ಸಿಪಿಐನ ಕರ್ನಾಟಕ ರಾಜ್ಯ ಮಂಡಳಿ ಮುದ್ರಿಸಿದ “ಏತಕ್ಕಾಗಿ ಬಿಜೆಪಿಯನ್ನು ಸೋಲಿಸಬೇಕು” ಎಂಬ 32 ಪುಟಗಳ ಕಿರುಹೊತ್ತಗೆ ಬಿಡುಗಡೆಯನ್ನು ಪಕ್ಷದ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಬಿಡುಗಡೆಗೊಳಿಸಿದರು. ಮಾಜಿ ಸಚಿವರಾದ ರಮಾನಾಥ ರೈ ಉಪಸ್ಥಿತರಿದ್ದು ಸಾಂಧರ್ಭೋಚಿತವಾಗಿ ಮಾತನಾಡಿದರು. ಸಭಾಧ್ಯಕ್ಷತೆಯ್ನು ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್ ವಹಿಸಿದ್ದರು.
ವೇದಿಕೆಯಲ್ಲಿ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಎಚ್.ವಿ.ರಾವ್, ಸಿಪಿಐ ಮಾಜಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಬೂಡಾದ ಅಧ್ಯಕ್ಷರಾದ.ಬೇಬಿ ಕುಂದರ್, ಕಾಂಗ್ರೆಸ್ ಮುಖಂಡ ಸುದಿಪ್ ಕುಮಾರ್ ಶೆಟ್ಟಿ, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ ಪಂಜಿಕಲ್ಲು, ಭಾರತೀಯ ಮಹಿಳಾ ಒಕ್ಕೂಟದ ನಾಯಕಿ ಭಾರತಿ ಪ್ರಶಾಂತ್ ಉಪಸ್ಥಿತರಿದ್ದರು. ಪಕ್ಷದ ಜಿಲ್ಲಾ ಸಹಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ನಿರೂಪಿಸಿದರು. ಪಕ್ಷದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಪ್ರೇಮನಾಥ ಕೆ. ವಂದಿಸಿದರು.