ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷರಾಗಿದ್ದ ವಾಮದಪದವು ನಿವಾಸಿ ಪದ್ಮನಾಭ ಸಾವಂತ ಭಾನುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ದೊರಕಿದ್ದು, ಇವರ ಸಾವಿನ ಹಿಂದೆ ಹಲವು ಸಂಶಯಗಳಿದ್ದು, ಸಾವಿಗೆ ಕಾರಣರಾದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಒತ್ತಾಯಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮಂತ್ ಅವರು ಸಾಮಾಜಿಕ ಜಾಲತಾಣ ಸಹಿತ ಹಲವು ವಿಧಗಳಲ್ಲಿ ಅಕ್ರಮಗಳನ್ನು ಬಯಲಿಗೆಳೆಯುವ ಕೆಲಸವನ್ನು ಮಾಡಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ವಿರೋಧಿಗಳಿಂದ ಬೆದರಿಕೆ ಇತ್ತು. ಅವರ ಸಾವು ಸಂಶಯಾಸ್ಪದವಾಗಿದ್ದು, ಅದೊಂದು ಹತ್ಯೆ ಆಗಿರುವ ಸಂಶಯವಿದೆ ಎಂದವರು ಹೇಳಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಸಾವಂತ್ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಜಿಲ್ಲಾ ಮಟ್ಟದ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದರು. ಕೆಪಿಸಿಸಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್ ಮಾತನಾಡಿ ಪದ್ಮನಾಭ ಸಾಮಂತ್ ಓರ್ವ ನಿಷ್ಠಾವಂತ ಕಾರ್ಯಕರ್ತನಾಗಿದ್ದಾಗಿ ಹೇಳಿದರು. ಪ್ರಮುಖರಾದ ಪ್ರಶಾಂತ್ ಕುಲಾಲ್, ಸುರೇಶ್ ಪೂಜಾರಿ ಜೋರ, ಪ್ರವೀಣ್ ರೋಡ್ರಿಗಸ್, ಚಂದ್ರಹಾಸ ನಾಯ್ಕ್, ವೆಂಕಪ್ಪ ಪೂಜಾರಿ ಬಂಟ್ವಾಳ ಈ ಸಂದರ್ಭ ಉಪಸ್ಥಿತರಿದ್ದರು
ಘಟನೆಯ ವಿವರ ಹೀಗಿದೆ:
ಪದ್ಮನಾಭ ಸೇವಂತ (34) ಎಂಬವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿತ್ತು. ಚೆನ್ನೈತೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಮದಪದವು ತಿಮರಡ್ಡ ನಿವಾಸಿಯಾಗಿರುವ ಇವರು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷರಾಗಿದ್ದರು. ಭಾನುವಾರ ಬೆಳಗ್ಗೆ ಅವರ ಮೃತದೇಹ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಈ ಕುರಿತು ಅವರ ಸಹೋದರ ನೀಡಿದ ದೂರಿನಂತೆ, ಪದ್ಮನಾಭ ಅವರು ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದು, ಮನೆಗೆ 2-3 ದಿನಗಳಿಗೊಮ್ಮೆ ಬರುತ್ತಿದ್ದರು. ಮಾರ್ಚ್ 28ರಂದು ಪದ್ಮನಾಭ ಸಾವಂತ ಮನೆಯಲ್ಲಿರದೆ ಮೋಟಾರು ಸೈಕಲ್ ಮಾತ್ರ ಮನೆಯಲ್ಲಿದ್ದು, ರಾತ್ರಿ ದೂರವಾಣಿ ಕರೆಮಾಡಿದಾಗ ಕರೆಯನ್ನು ಸ್ವೀಕರಿಸಿರಲಿಲ್ಲ. ಮಾರ್ಚ್ 31ರಂದು ಬೆಳಿಗ್ಗೆ ಮೃತದೇಹ ತೋಟದ ಹತ್ತಿರ ಇರುವ ಗುಡ್ಡ ಜಾಗದಲ್ಲಿ ನೇಣು ಬಿಗಿದುಕೊಂಡ ಸ್ಥೀತಿಯಲ್ಲಿ, ಅನುಮಾನಾಸ್ಪದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಮೃತದೇಹ ಕೊಳೆತ ಸ್ಥಿತಿಯಲ್ಲಿ, ಅನುಮಾನಾಸ್ಪದ ರೀತಿಯಲ್ಲಿ ನೇತಾಡುತ್ತಿರುವುದು ಕಂಡುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಠಾಣೆಯಲ್ಲಿ 174 (3)(vi)ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.