ಬಂಟ್ವಾಳ: ನರಿಕೊಂಬು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೆಲ ಭಾಗಗಳಲ್ಲಿ ಕಳೆದ ಎರಡು – ಮೂರು ದಿನಗಳಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಈ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಅವರು ಅಧಿಕಾರಿಗಳನ್ನು ಸಂಪರ್ಕಿಸಿ, ಸಮಸ್ಯೆಗೆ ಶೀಘ್ರ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯ ಗೇಟ್ ವಾಲ್ವ್ ನಲ್ಲಿ ತೊಂದರೆ ಉಂಟಾದ ಕಾರಣ ನಾಯಿಲ, ದಿಂಡಿಕೆರೆ, ಮಾರುತಿನಗರ ಮತ್ತಿತರ ಕಡೆಗಳಿಗೆ ಹೋಗುವ ನೀರು ಸರಬರಾಜು ಕೊಳವೆಗಳಲ್ಲಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದಾಗಿ ಅವರು ತಿಳಿಸಿದ್ದು, ಮಾಹಿತಿ ದೊರೆತ ಕೂಡಲೇ ಅವರು ಸಂಬಂಧಪಟ್ಟ ಇಂಜಿನಿಯರುಗಳು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿದರು. ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಕಾಂಬ್ಳೆ ಪ್ರತಿಕ್ರಿಯೆ ನೀಡಿ, ನರಿಕೊಂಬು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ, ವಿತರಣೆಯಲ್ಲಿ ದೋಷವುಂಟಾದ ಕಾರಣ ಸಮಸ್ಯೆ ತಲೆದೋರಿದ್ದು, ಪರಿಹರಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.