ಸರ್ಕಾರಿ ಶಾಲೆಗಳ ಮಕ್ಕಳಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ, ಪಿಎಂಶ್ರೀ, ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ, ಅಡಿಯಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಒಳಪಟ್ಟು ನಾಲ್ಕು ಶಾಲೆಗಳು ಆಯ್ಕೆಗೊಂಡಿವೆ. ಇವುಗಳಲ್ಲಿ ಬಂಟ್ವಾಳ ತಾಲೂಕಿನ 3 ಮತ್ತು ಉಳ್ಳಾಲ ತಾಲೂಕಿನ ಒಂದು ಶಾಲೆ ಸೇರಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ತಿಳಿಸಿದ್ದಾರೆ.
ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹೂಹಾಕುವಕಲ್ಲು ಹಿರಿಯ ಪ್ರಾಥಮಿಕ ಶಾಲೆ, ಬಿ.ಸಿ.ರೋಡಿನ ಕೊಡಂಗೆ ಹಿರಿಯ ಪ್ರಾಥಮಿಕ ಶಾಲೆ, ವಿಟ್ಲದ ಹಿರಿಯ ಪ್ರಾಥಮಿಕ ಶಾಲೆ ಈ ವರ್ಷದ ಸಾಲಿಗೆ ಆಯ್ಕೆಗೊಂಡಿದ್ದು, ಇದರಲ್ಲಿ ಹೂಹಾಕುವಕಲ್ಲು ಮುಡಿಪು ಬಳಿ ಉಳ್ಳಾಲ ತಾಲೂಕು ವ್ಯಾಪ್ತಿಗೆ ಒಳಪಡುತ್ತದೆ. ವಿಜ್ಞಾನ ಮತ್ತು ಗಣಿತ ಕಿಟ್ ಗಳು, ಸ್ಮಾರ್ಟ್ ತರಗತಿಗಳು ಮತ್ತು ಡಿಜಿಟಲ್ ಗ್ರಂಥಾಲಯ ಇವೆಲ್ಲವೂ ದೊರೆಯಲಿದೆ.
ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿರುವ ಶಾಲೆಗಳಿಗೆ ಸೌರಫಲಕಗಳು, ಎಲ್ ಇಡಿ ದೀಪಗಳು, ಉದ್ಯಾನವನ, ತ್ಯಾಜ್ಯ ನಿರ್ವಹಣೆ, ಮಳೆನೀರು ಕೊಯ್ಲು ಸೌಲಭ್ಯ ದೊರೆಯಲಿದೆ. ಜತೆಗೆ ಬೋಧನಾ ವಿಧಾನವು ಆಟ, ಆವಿಷ್ಕಾರ, ಚರ್ಚೆ ಆಧರಿತವಾಗಿರುತ್ತದೆ. ವಿಜ್ಞಾನ ಮತ್ತು ಗಣಿತ ಕಿಟ್ ವಿತರಣೆ, ಸ್ಮಾರ್ಟ್ ತರಗತಿಗಳು, ಡಿಜಿಟಲ್ ಗ್ರಂಥಾಲಯ, ಬೋಧನಾ ಕ್ರಮ, ಮೂಲಸೌಕರ್ಯ ಬಲಪಡಿಸುವುದು ಸೇರಿ ಇತರ ಸೌಲಭ್ಯ ಒದಗಿಸುವುದು ಯೋಜನೆಯ ಉದ್ದೇಶವಾಗಲಿದೆ.