ಬಂಟ್ವಾಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥ ಸಭಾಭವನದಲ್ಲಿ ಜ್ಞಾನವಿಕಾಸ ಕಾರ್ಯಕ್ರಮ ಹಾಗೂ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ನಡೆಯಿತು.
ಬಂಟ್ವಾಳ ತುಳು ಕೂಟದ ಅಧ್ಯಕ್ಷ ಸುಧರ್ಶನ್ ಜೈನ್ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳೆ ಸ್ವಾವಲಂಬಿಯಾಗಿ ಸಂಘಟತ್ಮಕವಾಗಿ ಬೆಳೆಯಲು ಜ್ಞಾನವಿಕಾಸ ಕಾರ್ಯಕ್ರಮಗಳು ಸ್ಪೂರ್ತಿದಾಯಕವಾಗಿದೆ ಎಂದರು
ಮಕ್ಕಳಿಗೆ ಮೂಲ ಸಂಸ್ಕೃತಿ ಕಲಿಸಿ ಸ್ವಾಭಿಮಾನದ ಬದುಕು ಕಟ್ಟಲು ಪ್ರೆರೇಪಿಸಿ ಎಂದು ಮಂಚಿ ಕೊಲ್ನಾಡು ಪ್ರೌಢಶಾಲಾ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಮಹಿಳಾ ವಿಚಾರಗೋಷ್ಠಿಯಲ್ಲಿ ಹದಿಹರೆಯದ ಮಕ್ಕಳನ್ನು ಸಭ್ಯ ನಾಗರಿಕರನ್ನಾಗಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತಾಡಿದರು. ಮಕ್ಕಳನ್ನು ಶಾಲೆಯ ತರಗತಿಯಲ್ಲಿ ಪಡೆಯುವ ಅಂಕಗಳ ಹಿಂದೆ ಹೋಗದೆ ಸಂಸ್ಕಾರ, ಸಂಸ್ಕೃತಿಯ ಹಿಂದೆ ಹೋಗುವಂತೆ ಬೆಳೆಸಬೇಕು, ಮಕ್ಕಳಿಗೆ ಮೊದಲು ಮನೆ ಕೆಲಸ ಮಾಡಲು ಕಲಿಸಿ, ಮಕ್ಕಳನ್ನು ಬೇರೆಯವರೊಡನೆ ತುಲನೆ ಮಾಡಲು ಹೋಗಬೇಡಿ, ಪ್ರೀತಿ ವಾತ್ಸಲ್ಯದಿಂದ ದಾರಿ ತಪ್ಪದ ರೀತಿಯಲ್ಲಿ ಬೆಳೆಸಿರಿ ಎಂದು ಮಾತೆಯರಿಗೆ ಕಿವಿಮಾತು ಹೇಳಿದರು.
ರಾಜ್ಯ ಬಾಲಭವನ ಮಂಡಳಿ ಮಾಜಿ ಅಧ್ಯಕ್ಷರಾದ ಸುಲೋಚನಾ ಜಿ ಕೆ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರಲ್ಲಿ ಅರಿವು ಮೂಡಿಸಿ ಮಾತೆಯರನ್ನು ಸ್ವಾವಲಂಬಿಗಳಾಗಿ ಮಾಡಿಸುವ ಉದ್ದೇಶದಿಂದ ಪ್ರಾರಂಭವಾದ ಕೇಂದ್ರವೇ ಮಹಿಳಾ ಜ್ಞಾನವಿಕಾಸ ಕೇಂದ್ರಗಳು ಎಂದರು.
ಜ್ಞಾನವಿಕಾಸ ತಂಡಗಳಿಗೆ ಹೂಗುಚ್ಚ ತಯಾರಿ, ರಂಗೋಲಿ, ಜಾನಪದ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು, ಬಂಟ್ವಾಳ ಎಸ್ ವಿ ಎಸ್ ಶಾಲಾ ಶಿಕ್ಷಕಿ ಪೂರ್ಣಿಮಾ ಸ್ಪರ್ಧಾ ತೀರ್ಪುಗಾರರಾಗಿ ಸಹಕರಿಸಿದರು. ಬಂಟ್ವಾಳ ತಾಲೂಕಿನ ಅತ್ಯುತ್ತಮ ಜ್ಞಾನವಿಕಾಸ ಕೇಂದ್ರಗಳನ್ನು ಗುರುತಿಸಿ ಗೌರವಿಸಲಾಯಿತು.
ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆ ವಿಟ್ಲದ ನಿವೃತ ಯೋಜನಾಧಿಕಾರಿ ಸುಧಾ ಜೋಶಿ ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನವಿಕಾಸ ಸಮನ್ವಯಧಿಕಾರಿ ಕಮಲಾಕ್ಷಿ ವಂದಿಸಿದರು. ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ವಲಯ ಮೇಲ್ವಿಚಾರಕಿಗಳಾದ ಅಶ್ವಿನಿ, ರೂಪ, ತಾಲೂಕು ಕೃಷಿ ಅಧಿಕಾರಿ ಜನಾರ್ಧನ್, ಆಂತರಿಕ ಲೆಕ್ಕ ಪರಿಶೋಧಕ ರಾಜೇಶ್ ಸಹಕರಿಸಿದರು.