ಸುಡುಮದ್ದು ದಾಸ್ತಾನು ಮತ್ತು ಮಾರಾಟಗಳಿಗೆ ನಮೂನೆ ಐಇ-1 ಮತ್ತು ಐಇ-ಗಿ ನ ಖಾಯಂ ಪರವಾನಿಗೆಗಳನ್ನು ಸ್ಪೋಟಕ ಕಾಯ್ದೆ-2008ರ ನಿಯಮ 112(3) ರಂತೆ ಸಹಾಯಕ ಆಯುಕ್ತರಿಗೆ ಅಧಿಕಾರವನ್ನು ಪ್ರತ್ಯಯೋಜಿಸಿದ್ದು, ಜಿಲ್ಲೆಯ ಇಬ್ಬರು ಸಹಾಯಕ ಆಯುಕ್ತರು ಈ ದಿಸೆಯಲ್ಲಿ ಸೂಕ್ತ ಹಾಗೂ ಎಚ್ಚರಿಕೆಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ನಿರ್ದೇಶನ ನೀಡಿದರು.
ಮಾ.14ರ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುಡುಮದ್ದು ತಯಾರಿಕಾ ಘಟಕ ಮತ್ತು ದಾಸ್ತಾನು ಮಾರಾಟ ಮಳಿಗೆಗಳ ಸ್ಥಳ ಪರಿಶೀಲನೆ ನಡೆಸುವ ಹಾಗೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಕ್ಸ್‍ಪ್ಲೋಸಿವ್ ರೂಲ್ಸ್ 2008ರ ನಿಯಮ 112ರಂತೆ ಪರವಾನಿಗೆ ಷರತುಗಳನ್ನು ಪಾಲಿಸಲಾಗಿದೆ? ಅಥವಾ ಇಲ್ಲವೇ? ಎಂಬುದನ್ನು ಪರಿಶೀಲಿಸಿಕೊಂಡು ನವೀಕರಿಸಲು ಅವಕಾಶವಿದೆ. ಆದ್ದರಿಂದ ಸುಡು ಮದ್ದುಗಳ ದಾಸ್ತಾನು ಮತ್ತು ಮಾರಾಟಗಳಿಗೆ ನಮೂನೆ ಐಇ-1 ಮತ್ತು ಐಇ-ಗಿ ನ ಖಾಯಂ ಪರವಾನಿಗೆಗಳ ನವೀಕರಣ ಸಂದರ್ಭದಲ್ಲಿ ಅಗ್ನಿಶಾಮಕ ಇಲಾಖೆಯಿಂದ ವರದಿ ಪಡೆಯುವ ಬದಲಾಗಿ ಪರವಾನಿಗಳ ಮಂಜೂರಾತಿ ಆದೇಶದ ಷರತ್ತುಗಳನ್ನು ಪೂರೈಸಲಾಗಿದೆ? ಎಂಬುದನ್ನು ಪರಿಶೀಲಿಸಿಕೊಂಡು ನವೀಕರಿಸುವ ಬಗ್ಗೆ ನಿಯಮಾನುಸಾರ ಕ್ರಮ ವಹಿಸುವಂತೆ ತಿಳಿಸಿದರು.
ಪರವಾನಿಗೆಗಳ ಷರ್ತುಗಳನ್ನು ಪೂರೈಸಲಾಗಿದೆಯೇ? ಇಲ್ಲವೇ? ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹಾಯಕ ಆಯುಕ್ತರು ಖುದ್ದಾಗಿ ಅಥವಾ ಅಗ್ನಿ ಶಾಮಕ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ ಅವರು, ಅಲ್ಲಿ ಯಾವುದೇ ರೀತಿಯ ಅನಾಹುತಗಳಾದಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಬೇಕು, ನಿರಾಪೇಕ್ಷಣ ಪತ್ರ ನೀಡುವಾಗ ಯಾವುದೇ ರೀತಿಯ ಆತಂಕ ಅಲ್ಲಿರಬಾರದು ಎಂದು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 39 ಪರವಾನಗಿ ಪಡೆದ ಮಳಿಗೆಗಳಿದ್ದು, ಅಲ್ಲಿ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು, ಅದರ ಹೊರತು ಇದರೆ ಲೇಖನ ಸಾಮಗ್ರಿ ಸೇರಿದಂತೆ ಇತರೆ ಯಾವುದೇ ರೀತಿಯ ವಸ್ತುಗಳ ಮಾರಾಟ ನಿಷಿದ್ಧ. ಅಲ್ಲದೇ ಅನುಮತಿ ನೀಡದೇ ಇರುವ ಇತರೆ ಸುಡುಮದ್ದುಗಳನ್ನು ಮಾರಾಟ ಮಾಡುವಂತಿಲ್ಲ ಎಂದವರು ಹೇಳಿದರು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕ ಮಳಿಗೆಗಳಿಗೆ ನಿಯಮಾನುಸಾರ ಅನುಮತಿ ನೀಡಲಾಗುವುದು, ಮಳಿಗೆಗಳನ್ನು ಮೈದಾನಗಳಲ್ಲಿ ಹಾಕಿಕೊಳ್ಳಬೇಕು, ಜಿಲ್ಲೆಯ ತಹಶೀಲ್ದಾರರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳು ಈ ಬಗ್ಗೆ ಜವಾಬ್ದಾರಿ ಅರಿತುಕೊಂಡು ಕ್ರಮವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ್ ಗೋಯಲ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ ಕುಮಾರ್, ಸಹಾಯಕ ಆಯುಕ್ತರಾದ ಹರ್ಷವರ್ಧನ್, ಜುಬಿನ್ ಮೊಹಪಾತ್ರ, ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ರಂಗನಾಥ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಭರತ್ ಕುಮಾರ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ-ಕದ್ರಿ ವಿಭಾಗದ ಮಹಮದ್ ಜುಲ್ಫೀಕರ್ ನವಾಜ್, ತಹಶೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿದ್ದರು.