ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತದೆ ಎಂದು ಆರೋಪಿಸಿ ವಿಶ್ವಹಿಂದು ಪರಿಷತ್, ಬಜರಂಗದಳದ ಪುತ್ತೂರು ಜಿಲ್ಲಾ ಘಟಕದ ವತಿಯಿಂದ ಸೋಮವಾರ ಬಿ.ಸಿ.ರೋಡ್ ನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಯಿತು. ಈ ಸಂದರ್ಭ ಪ್ರತಿಭಟನಾಕಾರರನ್ನು ಬಂಟ್ವಾಳ ಪೋಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ನ್ಯಾಯವಾದಿ ಪ್ರಸಾದ್ ಕುಮಾರ್ ರೈ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಿರಂತರವಾಗಿ ಹಿಂದು ವಿರೋಧಿ ನೀತಿಯನ್ನು ಅನುಸರಿಸಿ ಅಶಾಂತಿಯನ್ನು ಸೃಷ್ಟಿ ಮಾಡಲು ಕಾರಣವಾಗುತ್ತಿದೆ ಎಂದರು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಗಳ ಬಗ್ಗೆ ಮೃದು ಧೋರಣೆ ತಾಳಿದ್ದಾರೆ ಎಂದು ಆರೋಪಿಸಿದ ಅವರು, ವಿಧಾನಸೌಧದೊಳಗೆ ಪಾಕ್ ಗೆ ಜೈಕಾರ ಹಾಕಲಾಗಿದೆ, ಬೆಂಗಳೂರಿನಲ್ಲಿ ಮತ್ತೆ ಬಾಂಬ್ ಬ್ಲಾಸ್ಟ್ ಆಗಿದೆ ಎಂದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಪ್ರಸನ್ನ ಮಾತನಾಡಿ, ಕಾಂಗ್ರೆಸ್ ಸರಕಾರದ ಒತ್ತಡಕ್ಕೆ ಮಣಿದು ಪೋಲೀಸರು ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು. ಜಿಲ್ಲಾ ಸಂಚಾಲಕ ಭರತ್ ಕುಮ್ಡೆಲು ಮಾತನಾಡಿ ಸರಕಾರದ ನೀತಿಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯಾ, ಸಹಸಂಚಾಲಕರಾದ ಗುರುರಾಜ್ ಬಂಟ್ವಾಳ, ಸಂತೋಷ್ ಸರಪಾಡಿ, ಶಿವಪ್ರಸಾದ ತುಂಬೆ, ಬಿಜೆಪಿ ಪ್ರಮುಖರಾದ ಎ.ಗೋವಿಂದ ಪ್ರಭು, ಕಿಶೋರ್ ಕುಮಾರ್ ಬೊಟ್ಯಾಡಿ, ದೇವದಾಸ್ ಶೆಟ್ಟಿ, ರಾಮ್ ದಾಸ ಬಂಟ್ವಾಳ, ಚೆನ್ನಪ್ಪ ಆರ್ ಕೋಟ್ಯಾನ್, ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ ,ಸಚಿನ್ ಮೆಲ್ಕಾರ್ ಮತ್ತಿತರ ಪ್ರಮುಖರು ಹಾಜರಿದ್ದರು.