2017ರಿಂದ ನೋಂದಣಿಯಾಗಿರುವ ಎಲ್ಲಾ ಸಾರ್ವಜನಿಕ ಬಸ್ಗಳು ಮುಂದಿನ ಒಂದು ತಿಂಗಳೊಳಗೆ ಬಾಗಿಲನ್ನು ಅಳವಡಿಸಿ ಅಫಿಧಾವಿತ್ ಸಲ್ಲಿಸಬೇಕು. 2017ರಿಂದ ನೋಂದಣಿಯಾಗುವ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಬಾಗಿಲನ್ನು ಹೊಂದಿರಬೇಕು ಎಂದು ಕಾನೂನಿನಲ್ಲಿಯೇ ಇದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಬಸ್ಸುಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಂದಿನ ಒಂದು ತಿಂಗಳೊಳಗೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಬಸ್ಸು ಮಾಲೀಕರು ಅಫಿಧಾವಿತ್ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್ಟಿಓಗೆ ನಿರ್ದೇಶಿಸಿದ್ದಾರೆ.
ಸಾರ್ವಜನಿಕರ ಜೀವರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು. ಇದರಲ್ಲಿ ನಿರ್ಲಕ್ಷ್ಯ ಸಹಿಸುವ ಪ್ರಶ್ನೆಯೇ ಇಲ್ಲ. ಬಸ್ಗಳಲ್ಲಿ ಬಾಗಿಲನ್ನು ಅಳವಡಿಸಬೇಕೆಂದು ಸಾರ್ವಜನಿಕರಿಂದಲೂ ತೀವ್ರ ಒತ್ತಡ ಬರುತ್ತಿವೆ. ಜನಸಂಪರ್ಕ ಸಭೆಗಳಲ್ಲಿಯೂ ಮನವಿಗಳು ಬಂದಿವೆ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತಿತರ ರಾಜ್ಯಗಳಲ್ಲೂ ಬಸ್ಗಳಲ್ಲಿ ಬಾಗಿಲು ಅಳವಡಿಸಿ ಸಂಚರಿಸುತ್ತಿವೆ. ಬೆಂಗಳೂರಿನಲ್ಲಿಯೂ ಸಿಟಿ ಬಸ್ಗಳಲ್ಲಿ ಬಾಗಿಲು ಇರುವುದರಿಂದ ಸಾರ್ವಜನಿಕರ ಸಂಚಾರ ನಿರಾತಂಕವಾಗಿದೆ. ಇದರಿಂದ ಸಂಚಾರ ವ್ಯವಸ್ಥೆಯೂ ಸುಗಮ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.