ಮಂಗಳೂರು ನಗರ ಸೇರಿದಂತೆ ಗ್ರಾಮಾಂತರ ಭಾಗಕ್ಕೆ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂ ಒಳಹರಿವು ಇನ್ನೇನು ಬಹುತೇಕ ಸ್ಥಗಿತಗೊಳ್ಳುವ ಆತಂಕ ಇರುವ ಕಾರಣ, ಹರೇಕಳ ಎಂಬಲ್ಲಿ ನಿರ್ಮಿಸಲಾದ ಡ್ಯಾಂನಲ್ಲಿ ನೀರು ಸಂಗ್ರಹಿದ್ದನ್ನು ತುಂಬೆ ಡ್ಯಾಂಗೆ ಪಂಪಿಂಗ್ ಮಾಡಲು ತೀರ್ಮಾನಿಸಲಾಗಿದೆ.
ಮಂಗಳೂರು ನಗರಕ್ಕೆ ಈ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ತೊಂದರೆಯಾಗುವುದನ್ನು ತಡೆಯುವ ಉದ್ದೇಶದಿಂದ ಆಯುಕ್ತರ ಸೂಚನೆಯಂತೆ ಮುಂಜಾಗೃತ ಕ್ರಮವಾಗಿ ತುಂಬೆ ಅಣೆಕಟ್ಟಿನ ಕೆಳಭಾಗದಿಂದ ನೀರನ್ನು ಡ್ಯಾಮ್ ಗೆ ಪಂಪ್ ಮಾಡಲು ಹೆಚ್ಚುವರಿಯಾಗಿ ಪಂಪ್ ಗಳನ್ನು ಅಳವಡಿಸುತ್ತಿರುವುದನ್ನು ಆಯುಕ್ತರು ಪರಿವೀಕ್ಷಿಸಿದರು, ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತುರ್ತು ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಲು ಸೂಚಿಸಿದರು
ಬಂಟ್ವಾಳ, ಸರಪಾಡಿ ಭಾಗದಿಂದ ತುಂಬೆ ಡ್ಯಾಂಗೆ ಒಳಹರಿವು ಸ್ಥಗಿತಗೊಂಡ ಕಾರಣ, ಡ್ಯಾಂನ ಗೇಟ್ ಗಳನ್ನು ಹಾಕಲಾಗಿದೆ. ಇನ್ನೊಂದೆಡೆ ಬಿಸಿಲ ಕಾವು ಏರುತ್ತಿದ್ದು, ನದಿಯಲ್ಲೂ ನೀರಿನ ಪ್ರಮಾಣ ಕುಸಿತವಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರಕ್ಕೆ ನೀರು ಸಮರ್ಪಕವಾಗಿ ನಿರ್ವಹಣೆ ಮಾಡುವ ಉದ್ದೇಶದಿಂದ ಮುಂದಿನ ವಾರದಿಂದಲೇ ಹರೇಕಳ ಡ್ಯಾಂ ಕಡೆಯಿಂದ ಪಂಪ್ ಮೂಲಕ ನೀರೆತ್ತುವ ಚಿಂತನೆ ಮಾಡಲಾಗುತ್ತಿದ್ದು, ಇದಕ್ಕಾಗಿ ಪಂಪ್ ಅಳವಡಿಕೆ ಕಾರ್ಯ ನಡೆಯುತ್ತಿದೆ. 2023ರಲ್ಲಿ ನೀರಿನ ಅಭಾವ ಎದುರಾಗಿದ್ದ ಸಂದರ್ಭ 13 ಪಂಪ್ ಬಳಕೆ ಮಾಡಿ, ತುಂಬೆ ಡ್ಯಾಂನ ಕೆಳಭಾಗದ ಹರೇಕಳ ಡ್ಯಾಂನಲ್ಲಿ ಸಂಗ್ರಹವಾದ ನೀರನ್ನು ಮೇಲೆತ್ತಲಾಗುತ್ತಿತ್ತು. ಈ ಮಧ್ಯೆ ಎರಡು ದಿನಕ್ಕೊಮ್ಮೆ ರೇಶನಿಂಗ್ ಮಾಡಿ ಮಂಗಳೂರಿನ ನೀರಿನ ಬವಣೆ ನೀಗಿಸುವ ಪ್ರಯತ್ನ ಮಾಡಲಾಗಿತ್ತು. ಅದೇ ಮಾದರಿಯನ್ನು ಈ ಬಾರಿಯೂ ಮಾಡುವ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಚಿಂತನೆ ನಡೆಯುತ್ತಿದ್ದು, ಯಾವಾಗ ರೇಶನಿಂಗ್ ಆರಂಭಗೊಳ್ಳುತ್ತದೆ ಎಂಬುದು ಕಾದು ನೋಡಬೇಕಾಗಿದೆ.