ಮೂಡೂರು ಪಡೂರು ಜೋಡುಕರೆ ಕಂಬಳ ಸಮಿತಿ ವತಿಯಿಂದ ಬಂಟ್ವಾಳ ಕಂಬಳ ಎಂದೇ ಹೆಸರಾದ 13ನೇ ವರ್ಷದ ಮೂಡೂರು ಪಡೂರು ಜೋಡುಕರೆ ಬಯಲು ಕಂಬಳ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಮಾರ್ಚ್.2ರ ಶನಿವಾರ ನಡೆಯಲಿದೆ. ಈ ಸಂದರ್ಭ ಗಣ್ಯರ ಉಪಸ್ಥಿತಿ ಇರಲಿದ್ದು, ಹಲವು ಹೊಸತನ, ವೈಶಿಷ್ಟ್ಯಗಳು ಇರಲಿವೆ.
ಈ ವಿಷಯವನ್ನು ಬಿ.ಸಿ.ರೋಡಿನ ರಂಗೋಲಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಪ್ರತಿ ಬಾರಿಯಂತೆ ಈ ಬಾರಿಯೂ ಹೊಸತನಗಳೊಂದಿಗೆ ಕಂಬಳವನ್ನು ನಡೆಸಲಾಗುವುದು. ವಿಐಪಿ ವೇದಿಕೆ ರಚಿಸುವ ಮೂಲಕ ಕಂಬಳಾಸಕ್ತರಿಗೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಇದುವರೆಗೆ ನಾವು ಆಯೋಜಿಸಿದ ಕಂಬಳಗಳಲ್ಲೆಲ್ಲ ಆಧುನಿಕ ಸ್ಪರ್ಶ ನೀಡಿದ್ದೆವು ಎಂದು ರೈ ಹೇಳಿದರು. ಕನೆಹಲಗೆಯಲ್ಲಿ ಏಳೂವರೆ ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ 2 ಪವನ್, ಆರೂವರೆ ಕೋಲು ನಿಶಾನಿಗೆ ಹಾಯಿಸಿದ ಕೋಣಗಳಿಗೆ 1 ಪವನ್, ಹಗ್ಗ ಹಿರಿಯ ಹಾಗೂ ನೇಗಿಲು ಹಿರಿಯ ಪ್ರಥಮಕ್ಕೆ 2 ಪವನ್ ಚಿನ್ನದ ಬಹುಮಾನ ಸಹಿತ ವಿಜೇತರಿಗೆ ಮೂಡೂರು ಪಡೂರು ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಕಂಬಳಕ್ಕೆ ಕಾನೂನಾತ್ಮಕವಾದ ಬಲ ನೀಡಲು ಹೋರಾಟ ನಡೆಸಿದ್ದೇನೆ ಎಂದ ಅವರು, ಈ ಬಾರಿ ಬಂಟ್ವಾಳ ಕಂಬಳ ನಡೆಯುವ ಜಾಗಕ್ಕೆ ತೆರಳುವ ರಸ್ತೆಯೂ ಅಗಲಗೊಂಡಿದೆ ಎಂದರು.
ಸೋಲೂರು ಕರ್ನಾಟಕ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಅಳದಂಗಡಿ ಅರಸ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ, ಅಲ್ಲಿಪಾದೆ ಸಂತ ಆಂತೋನಿ ಧರ್ಮಕೇಂದ್ರದ ಧರ್ಮಗುರು ವಂದನೀಯ ಫೆಡ್ರಿಕ್ ಮೊಂತೆರೋ ಕಂಬಳವನ್ನು ಬೆಳಗ್ಗೆ 8.45ಕ್ಕೆ ಉದ್ಘಾಟಿಸುವರು. ಅತಿಥಿಗಳಾಗಿ ಫರ್ಲಾ ಚರ್ಚ್ ಧರ್ಮಗುರು ವಂ.ಜೋನ್ ಪ್ರಕಾಶ್ ಡಿಸೋಜ, ಕೆನರಾ ಬಸ್ ಮಾಲೀಕರ ಸಂಘಧ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಪ್ರಮುಖರಾದ ಲೀಲಾಕ್ಷ ಕರ್ಕೇರ, ಬಿ.ಎಚ್. ಖಾದರ್, ಶಶಿಧರ ಹೆಗ್ಡೆ, ರಘುನಾಥ ಸೋಮಯಾಜಿ, ಉಮೇಶ್ ಶೆಟ್ಟಿ ಮಾಣಿಸಾಗು, ಲಿಯೋ ಫೆರ್ನಾಂಡೀಸ್ ಸರಪಾಡಿ ಭಾಗವಹಿಸುವರು. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಗೃಹಸಚಿವ ಡಾ. ಜಿ. ಪರಮೇಶ್ವರ್, ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ರೈ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಸಂಚಾಲಕ ಬಿ.ಪದ್ಮಶೇಖರ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ,,ಸುದರ್ಶನ ಜೈನ್, ಮಾಯಿಲಪ್ಪ ಸಾಲಿಯಾನ್, ಶಬೀರ್ ಸಿದ್ದಕಟ್ಟೆ, ಎಂ.ಎಸ್.ಮಹಮ್ಮದ್, ಸುಭಾಶ್ಷಂದ್ರ ಶೆಟ್ಟಿ ಕುಳಾಲು, ಸಂದೇಶ್ ಶೆಟ್ಟಿ, ರಾಜೇಶ್ ರೋಡ್ರಿಗಸ್, ಪ್ರವೀಣ್ ರೋಡ್ರಿಗಸ್, ಪ್ರಕಾಶ್ ಆಳ್ವ, ಉಮೇಶ್ ಕುಲಾಲ್, ಲೆಸ್ಸನ್ ರೋಡ್ರಿಗಸ್, ಜನಾರ್ದನ ಚಂಡ್ತಿಮಾರ್, ಸೀತಾರಾಮ ಶಾಂತಿ, ಮಂಜುಳ ಕುಶಲ , ಎಡ್ತೂರು ರಾಜೀವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.