ಬಂಟ್ವಾಳ: ಯುವತಿಯೊಬ್ಬರು ನೇತ್ರಾವತಿ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಬಂಟ್ವಾಳ ರೈಲ್ವೆ ಸೇತುವೆಯಲ್ಲಿ ರೈಲು ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ತುಮಕೂರಿನ ಮಧುಗಿರಿ ತಾಲೂಕಿನ ಮಿಡಿಗೇಶಿ ಎಂಬಲ್ಲಿನ ನಿವಾಸಿ ನಯನಾ ಎಂ.ಜಿ. (26) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಯುವತಿ ರೈಲಿನಿಂದ ಹಾರಿ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದ್ದು, ಈಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಬೆಳಗ್ಗೆ ಸುಮಾರು 6.25ಕ್ಕೆ ಆಗಮಿಸುವ ಬೆಂಗಳೂರು ಕಣ್ಣೂರು ಮಂಗಳೂರು ರೈಲಿನಲ್ಲಿ ಬಂದಿದ್ದ ಈಕೆ, ರೈಲು ಕೈಕುಂಜದ ಸೇತುವೆಯಲ್ಲಿ ನಿಧಾನವಾಗುತ್ತಿದ್ದಂತೆ ಅಲ್ಲಿ ತಡೆಬೇಲಿ ಇಲ್ಲದ ಜಾಗವನ್ನು ನೋಡಿ ನದಿಗೆ ಧುಮುಕಿರಬಹುದು ಎಂದು ಸಂಶಯಿಸಲಾಗಿದೆ. ಇದನ್ನು ನೋಡಿ ಕೂಡಲೇ ಸಹಪ್ರಯಾಣಿಕರು ಮಾಹಿತಿ ನೀಡಿದ್ದು, ಸ್ಥಳೀಯ ಜೀವರಕ್ಷಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಗೂಡಿನಬಳಿಯ ನೇತ್ರಾವತಿ ಜೀವರಕ್ಷಕ ತಂಡದ ಸದಸ್ಯರು ಸೇವಾಂಜಲಿ ದೋಣಿಯಲ್ಲಿ ಸಾಗಿ, ಮೃತದೇಹವನ್ನು ಪತ್ತೆಹಚ್ಚಿ, ದಡಕ್ಕೆ ತಂದಿದ್ದಾರೆ. ಅವಳು ಕುಳಿತು ಕೊಂಡಿದ್ದ ಸೀಟಿನಲ್ಲಿದ್ದ ಬ್ಯಾಗ್ ನ್ನು ರೈಲ್ವೆ ಸಿಬ್ಬಂದಿಗಳು ಬಿಸಿರೋಡಿನ ಪೊಲೀಸರಿಗೆ ನೀಡಿ ವಿಚಾರ ತಿಳಿಸಿದ್ದಾರೆ. ಕೇರ್ ಆಫ್ ಎಂ.ವಿ.ಗೋವಿಂದ ರಾಜು, ಪಡಸಾಲಹಟ್ಟಿ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲೂಕು, ತುಮಕೂರು ಜಿಲ್ಲೆ. ಹೊಸಕೆರೆ ತುಮಕೂರು ಎಂಬ ವಿಳಾಸವನ್ನು ಹೊಂದಿರುವ ಆಧಾರ್ ಕಾರ್ಡ್ ಮೃತ ಯುವತಿ ಬ್ಯಾಗಿನಲ್ಲಿ ದೊರಕಿದೆ. ಇದರ ಆಧಾರದಲ್ಲಿ ಈಕೆಯ ಹೆಸರು ನಯನ ಎಂ.ಜಿ. ಎಂದು ಹೇಳಲಾಗಿದ್ದು, 26 ವರ್ಷದವರಾಗಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆಯ ಸಿಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.