ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ ಬಿ.ಸಿ.ರೋಡ್ ನ ಪೊಲೀಸ್ ಲೈನ್ ನಲ್ಲಿದ್ದು, ಇದರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಾ ಮಹೋತ್ಸವ ಫೆಬ್ರವರಿ 16ರಿಂದ ಆರಂಭಗೊಂಡು 24ರವರೆಗೆ ನಡೆಯಲಿದ್ದು, ಶುಕ್ರವಾರ ಸಂಜೆ 4.30ಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಈ ವಿಚಾರವನ್ನು ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಮತ್ತು ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಪ್ರಯುಕ್ತ ಶುಕ್ರವಾರ ಸಂಜೆ 4.30ಕ್ಕೆ ಅದ್ದೂರಿಯ ಹಸಿರುವಾಣಿ ಹೊರೆಕಾಣಿಕೆ ಪೊಳಲಿ ಕೈಕಂಬ ದ್ವಾರದಿಂದ ಮೆರವಣಿಗೆ ನಡೆಯಲಿದ್ದು, ಇದರಲ್ಲಿ ಸುಮಾರು 75 ವಾಹನಗಳು ಪಾಲ್ಗೊಳ್ಳುತ್ತವೆ. ಈಗಾಗಲೇ 65 ವಾಹನಗಳು ನೋಂದಾವಣೆಯಾಗಿವೆ. ಇದಲ್ಲದೆ ಊರವರಿಂದ ಸುಮಾರು 180 ಕ್ವಿಂಟಲ್ ಅಕ್ಕಿ ಸಹಿತ ಇತರ ಪದಾರ್ಥಗಳು ದಾನವಾಗಿ ಬಂದಿವೆ. ಪ್ರತಿದಿನ 10 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಬಿ.ಸಿ.ರೋಡ್ ನಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ಇರುವ ಕಾರಣ ಸ್ಥಳೀಯರು ವಾಹನಗಳನ್ನು ಹೊರತರದೆ ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭ ಮಾಹಿತಿ ನೀಡಿದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಬ್ರಹ್ಮಕಲಶೋತ್ಸವ ನಿಮಿತ್ತ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಪೊಲೀಸ್ ಇಲಾಖೆಯ ಅತ್ಯುನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು, ಮಠಾಧಿಪತಿಗಳು ಹಾಗೂ ಧಾರ್ಮಿಕ ಚಿಂತಕರು ಪ್ರತಿದಿನ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 22ರಂದು ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಬೆಳಗ್ಗೆ 11.33ಕ್ಕೆ ನಡೆಯಲಿದ್ದು, ರಾತ್ರಿ ವಾರ್ಷಿಕ ಜಾತ್ರಾ ಮಹೋತ್ಸವ ಇರಲಿದೆ. 23ರಂದು ಗುಳಿಗ ದೈವದ ವರ್ಷಾವಧಿ ಕೋಲ ನಡೆಯುವುದು ಎಂದರು. ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಸದಸ್ಯ ಸದಾಶಿವ ಬಂಗೇರ, ಪ್ರಮುಖರಾದ ಸತೀಶ್ ಅಮರ್, ಬಾಲಕೃಷ್ಣ ಆಳ್ವ ಮತ್ತಿತರರು ಉಪಸ್ಥಿತರಿದ್ದರು.