ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಟಾಸ್ಕ್ ಫೋರ್ಸ್ ಸಮಿತಿ ಸಭೆ ಸೋಮವಾರ ಬೆಳಗ್ಗೆ ತಾಲೂಕು ಆಡಳಿತ ಸೌಧದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ತಹಸೀಲ್ದಾರ್ ಡಿ.ಅರ್ಚನಾ ಭಟ್ ಸಹಿತ ತಾಲೂಕಿನ ಉನ್ನತ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಇಲಾಖಾವಾರು ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.
ಕ್ಷೇತ್ರದಲ್ಲಿ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿಗೆ ಈ ಸಾಲಿನ ಬೇಸಗೆಯಲ್ಲಿ ಕೊರತೆ ಉಂಟಾಗುವ ಸಂಭವ ಇಲ್ಲ ಎಂದು ಪಶುಸಂಗೋಪನಾ ಇಲಾಖೆ ವೈದ್ಯಾಧಿಕಾರಿ ಡಾ. ಅವಿನಾಶ್ ಭಟ್ ಮಾಹಿತಿ ನೀಡಿದರು. ಕನ್ಯಾನ ಸಹಿತ ಎರಡು ಕಡೆಗಳಲ್ಲಿ ತಾಲೂಕಿನಲ್ಲಿ ಗೋಶಾಲೆ ಇದೆ ಎಂಬ ಮಾಹಿತಿ ನೀಡಿದ ಅವರು, ಈಗಾಗಲೇ ಮಿನಿ ಕಿಟ್ ಗಳನ್ನು ವಿತರಿಸಲಾಗಿದೆ. ಹಿಂಗಾರು ಮಳೆ ಉತ್ತಮವಾಗಿ ಆಗಿರುವ ಕಾರಣ ಹುಲ್ಲುಗಳು ಬೆಳೆದಿದ್ದು, ಸಮಸ್ಯೆಗಳು ಇಲ್ಲ, ಹಿನ್ನೀರಿನ ಪ್ರದೇಶಗಳಲ್ಲಿ ಹುಲ್ಲು ಬೆಳೆಸುವ ಕಾರ್ಯವೂ ಪ್ರಗತಿಯಲ್ಲಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ಈ ಕುರಿತು ಮಾಹಿತಿ ನೀಡಿ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕುರಿತು ಲಸಿಕೆಗಳು ಇಲಾಖೆಯಲ್ಲಿ ಲಭ್ಯವಿದೆ ಎಂದರು.
ಪುಚ್ಚೆಮೊಗರು ನೀರಿನ ಡ್ಯಾಂನಲ್ಲಿ ಕಳೆದ ಬಾರಿ ಪುಚ್ಚೆಮೊಗರು ನೀರಿನ ಡ್ಯಾಂನಲ್ಲಿ ಅವಧಿಗೆ ಮುನ್ನ ನೀರು ಹಾಯಿಸಿ ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆಯಾಗಿರುವ ಕುರಿತು ವಿವರಣೆಯನ್ನು ಶಾಸಕರು ಕೇಳಿದರು. ಈ ಬಾರಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಬೇಸಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಯಾವುದೇ ಸಾಧ್ಯತೆ ಇರುವುದಿಲ್ಲ ಎಂದು ಇಂಜಿನಿಯರುಗಳು ಮಾಹಿತಿ ನೀಡಿದರು. ಸದಸ್ಯ ಕಾರ್ಯದರ್ಶಿಯಾದ ತಹಸೀಲ್ದಾರ್ ಮಾತನಾಡಿ, ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆಯಾಗುವ ನೀರು ಸರಬರಾಜು ಮಾಡುವಾಗ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ನೀರಿನ ಗುಣಮಟ್ಟ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವದಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂಥ ಯಾವುದಾದರೂ ಪ್ರದೇಶಗಳು ಇರುವುದೇ ಎಂಬ ಕುರಿತು ಮಾಹಿತಿಯನ್ನು ಶಾಸಕರು ಕೇಳಿದರು.ಈ ಸಂದರ್ಭ ಇಲಾಖಾ ಮುಖ್ಯಸ್ಥರಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರವಾಗಿ ಕಚೇರಿ ಸಹಾಯಕರು ಮಾಹಿತಿ ನೀಡಿ ಅಂಥ ಪರಿಸ್ಥಿತಿ ಇಲ್ಲವೆಂದರು.
ತಹಸೀಲ್ದಾರ್ ಈ ಸಂದರ್ಭ ಮಾತನಾಡಿ, ಗ್ರಾಮಮಟ್ಟದಲ್ಲಿ ಮನೆಮನೆ ಪೈಪ್ ಲೈನ್ ಮೂಲಕ ಪಂಚಾಯಿತಿಯಿಂದ ಕುಡಿಯುವ ನೀರಿನ ಸರಬರಾಜು ಆಗುತ್ತಿದ್ದು, ಯಾವುದೇ ಪೋಲಾಗದಂತೆ ಎಚ್ಚರಿಕೆ ವಹಿಸುವುದು ಹಾಗೂ ಪೈಪ್ ಲೈನ್ ಗಳನ್ನು ಸುಸ್ಥಿತಿಯಲ್ಲಿ ಇಡುವುದು ಅಗತ್ಯ ಎಂದು ಮನವರಿಕೆ ಮಾಡಿದರು.
ಕಾಡ್ಗಿಚ್ಚು, ಅಗ್ನಿ ಅವಘಡಗಳಲ್ಲಿ ಪ್ರಾಣಹಾನಿ ಆದಲ್ಲಿ ಹಾಗೂ ದುರ್ಘಟನೆ ಕಂಡುಬಂದಲ್ಲಿ ಮೆಸ್ಕಾಂ ವತಿಯಿಂದ ಅಳವಡಿಸಲಾದ ಟ್ರಾನ್ಸ್ ಫಾರ್ಮರ್ ಅಡಿಯಲ್ಲಿ ಇರುವ ಹುಲ್ಲು ಸ್ವಚ್ಛಮಾಡದೆ ಇರುವುದರಿಂದ ಅಗ್ನಿ ಅವಘಡ ಹೆಚ್ಚಾಗುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿ, ಕ್ರಮ ಕೈಗೊಳ್ಳುವಂತೆ ಕೋರಿದರು. ಈ ಕುರಿತು ಸೂಚನೆ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಫ್ರೂಟ್ಸ್ ತಂತ್ರಾಂಶದಲ್ಲಿ ಪ್ರಗತಿ ಸಾಧಿಸಲು ತೋಟಗಾರಿಕೆ ಮತ್ತು ಕೃಷಿ ಇಲಾಖೆಯವರು ಪೂರ್ಣ ಸಹಕಾರ ನೀಡುವಂತೆ ತಹಸೀಲ್ದಾರ್ ತಿಳಿಸಿದರು. ಕೃಷಿಕರಿಗೆ ಸೂಕ್ತ ಮಾಹಿತಿ ನೀಡುವಂತೆ, ಜಾಗೃತಿ ಮೂಡಿಸುವಂತೆ ಗಮನ ಸೆಳೆಯಲಾಯಿತು. ವಿವಿಧ ಇಲಾಖಾಧಿಕಾರಿಗಳಾದ ತಾರಾನಾಥ ಸಾಲ್ಯಾನ್, ಡಾ. ಅವಿನಾಶ್ ಭಟ್, ಲೀನಾ ಬ್ರಿಟ್ಟೊ ಮತ್ತಿತರರು ಉಪಸ್ಥಿತರಿದ್ದರು.